ಸುದ್ದಿಮೂಲ ವಾರ್ತೆ
ಮೈಸೂರು, ಮೇ 31: ತನ್ನ ಪ್ರಿಯತಮೆಗೆ ಮೆಸೇಜ್ ಕಳುಹಿಸಿದ ಎಂದು ಆಕ್ರೋಶಗೊಂಡ ಯುವಕ ತನ್ನ ಜೊತೆಯಲ್ಲಿ ಇದ್ದ ರೂಂಮೇಟ್ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಇಲ್ಲಿ ನಡೆದಿದೆ. ಆರೋಪಿ ಶ್ರೇಯಸ್ ಬಂಧನಕ್ಕಾಗಿ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಶೋಧನೆ ನಡೆಸಿದ್ದಾರೆ.
ಗಾಯಗೊಂಡ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರುಣಾ ಬಳಿ ಇರುವ ಗ್ರಾಮವೊಂದರ ಯುವತಿ ಪ್ರಿಯಾ ಹಾಗೂ ಶ್ರೇಯಸ್ ಪ್ರೇಮಿಗಳು. ಶ್ರೇಯಸ್ ಹಾಗೂ
ಶಿವಕುಮಾರ್ ರೂಂ ಮೇಟ್ ಗಳು. ಜನತಾನಗರದ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ಒಟ್ಟಿಗೆ ವಾಸವಾಗಿದ್ದರು. ಪ್ರಿಯಾ ಜೊತೆ ಸಂಪರ್ಕ ಬೆಳೆಸಿದ ಶಿವಕುಮಾರ್ ಆಕೆಯ ಜೊತೆ ಚಾಟ್ ಮಾಡುತ್ತಿದ್ದ. ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಆಗಿದೆ. ತನ್ನ ಪ್ರಿಯತಮೆ ಸಹವಾಸಕ್ಕೆ ಬಾರದಂತೆ ಶ್ರೇಯಸ್ ಎಚ್ಚರಿಕೆ ನೀಡಿದ್ದ. ಅದರೂ ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ.
ಇದೇ ವಿಚಾರದಲ್ಲಿ ನಂಜನಗೂಡು ರಿಂಗ್ ರಸ್ತೆ ಬಳಿ ಮಂಗಳವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಶಿವಕುಮಾರ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.