ಸುದ್ದಿಮೂಲ ವಾರ್ತೆ
ಮೈಸೂರು, ಅ.26:ಚಾಮುಂಡಿಬೆಟ್ಟದಲ್ಲಿ ಗುರುವಾರ ನಡೆದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವ ಭಕ್ತಿ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಹಸಿರು ಬಣ್ಣದ ಸೀರೆಯುಡಿಸಿ ಆಭರಣಗಳನ್ನು ಧರಿಸಲಾಗಿದ್ದ ಚಾಮುಂಡಿ ತಾಯಿ ಮೂರ್ತಿಯನ್ನು ಪ್ರಥಮವಾಗಿ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ನಂತರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ 7.55 ರಿಂದ 8. 20 ರ ವೃಶ್ಚಿಕ ಶುಭಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೂಡ ರಥೋತ್ಸವನ್ನು ರಥದ ಬೀದಿಯಲ್ಲಿ ನಿಂತು ವೀಕ್ಷಣೆ ಮಾಡಿದರು. ನೆರದಿದ್ದ ಭಕ್ತರು ತಾಯಿ ಊಘೇ ಉಘೇ ಎನ್ನುತ್ತಾ ರಥಕ್ಕೆ ಹಣ್ಣು ಧವನ ಎಸೆದು ಜೈಕಾರದೊಂದಿಗೆ ಭಕ್ತಿ ಮೆರೆದರು.
ಈ ವೇಳೆ ರಥೋತ್ಸವದ ಬೀದಿಯಲ್ಲಿ 21 ಕುಶಾಲತೋಪು ಸಿಡಿಸಿ ಪೊಲೀಸ್ ಇಲಾಖೆ ಗೌರವ ಸಲ್ಲಿಸಿತು. ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು. ನವರಾತ್ರಿ ನಂತರ ಬರುವ ಹಾಗೂ ವಿಜಯದಶಮಿಯ ಜಂಬೂಸವಾರಿಯ ಶುಭ ಮುಹೂರ್ತದಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಯ ರಥೋತ್ಸವವನ್ನು ನಡೆಸಿ,ಳಿಕ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಗುತ್ತದೆ.
ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ : ಪ್ರಮೋದದೇವಿ
ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ಮಾತನಾಡಿ, ರಥೋತ್ಸವದಲ್ಲಿ ಭಾಗಿಯಾಗಿ ನಮ್ಮ ನಾಡು ಸುಭಿಕ್ಷವಾಗಲಿ ಎಂದು ಬೇಡಿಕೊಂಡಿದ್ದೇವೆ. ಜೊತೆಗೆ ಮಳೆ, ಬೆಳೆ ಮುಂದೆಯಾದರು ಆಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಪ್ರಮೋದಾ ದೇವಿ ಒಡೆಯರ್ ಹೇಳಿದರು.
ರಾಜವಂಶಸ್ಥ ಯದುವೀರ್ ಒಡೆಯರ್ ಮಾತನಾಡಿ, ಅಮ್ಮನವರ ವಾರ್ಷಿಕ ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾಂಪ್ರದಾಯದ ರೀತಿಯಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದಿದ್ದು ಎಲ್ಲ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ನಾಡಿನ ಜನರಿಗೆ ಆಯುರ್ ಆರೋಗ್ಯ, ಆಯುಷ್ಯ ನೀಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದರು.