ಸುದ್ದಿಮೂಲ ವಾರ್ತೆ
ರಾಯಚೂರು, .18
ಪ್ರತಿ ಮನುಷ್ಯನು ತನ್ನಲ್ಲಿ ಇರುವ ದುರ್ಗುಣಗಳು ಬಲಿಕೊಟ್ಟು ಶಿವನ ಜಾಗರಣೆಯಲ್ಲಿ ಪೂರ್ಣಧ್ಯಾನ ಮಾಡಬೇಕು ಎಂದು ರಾಜಯೋಗಿನಿ ಸ್ಮಿತಾ ಅಕ್ಕ ಅವರು ಸಲಹೆ ಮಾಡಿದರು.
ಇಂದು ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಲಾದ 87ನೇಯ ಶಿವರಾತ್ರಿ ಉತ್ಸವದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವರಾತ್ರಿ ಎಂದರೆ ಕತ್ತಲೆಯನ್ನು ಮತ್ತು ಅಂಧಕಾರ, ಅಜ್ಞಾನವನ್ನು ಹೋಗಲಾಡಿಸಲು ಆ ಪರಮಾತ್ಮನ ಧ್ಯಾನ ಮಾಡುವುದರ ಸಂಕೇತವಾಗಿದೆ. ಅದರ ಪರಿಣಾಮವಾಗಿ ಪ್ರತಿವರ್ಷ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ ಎಂದರು.
ಶಿವರಾತ್ರಿ ದಿನ ಉಪವಾಸ ಮಾಡುವುದೆಂದರೆ ಉಪ ಅಂದರೆ ಹತ್ತಿರ ವಾಸ ಎಂದರೆ ವಾಸಿಸುವುದು. ಶಿವನ ಹತ್ತಿರ ವಾಸ ಮಾಡುವುದರ ಸಂಕೇತವಾಗಿಯೇ ನಾವು ಭೌತಿಕವಾಗಿ ಉಪವಾಸ ಮಾಡುತ್ತೇವೆ. ಜಾಗರಣೆ ಎಂದರೆ ಮನುಷ್ಯನು ಸದ್ಗುಣಗಳನ್ನು ಅರಿಯುವ ಜಾಗೃತಿಯ ದಿನವೇ ಶಿವರಾತ್ರಿ ಜಾಗರಣೆ ಎಂದು ಹೇಳಿದರು.
ಭೌತಿಕ ಸಂಪತ್ತು ಮತ್ತು ಸೌಲತ್ತುಗಳು ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಕಲ್ಪಿಸುವುದಿಲ್ಲ. ಶಾಂತಿ, ಸುಖ, ನೆಮ್ಮದಿ ಸಿಗಬೇಕಾದರೆ ಆಧ್ಯಾಾತ್ಮಿಕ, ಭಕ್ತಿ, ಧ್ಯಾನ, ಉಪಾಸನೆಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಾವು ಯಾವುದಾದರೂ ಬಲಿ ಕೊಡುವುದಾದರೆ ನಮ್ಮಲ್ಲಿರುವ ದುರ್ಗುಣಗಳನ್ನು ಬಲಿ ಕೊಡಬೇಕೆ ವಿನಃ ಯಾವುದಾದರೂ ಪ್ರಾಣಿ ಅಥವಾ ಮನುಷ್ಯನ ಬಲಿ ಕೊಡುವುದು ಅಲ್ಲ. ಅದಕ್ಕಾಗಿ ಆಧ್ಯಾಾತ್ಮಿಕ ಎಂಬ ಅರಿವಿನ ಅಂತರ್ಜ್ಯೋತಿ ಮನುಷ್ಯನಲ್ಲಿದ್ದು ಅದನ್ನು ಅರಿತು ನಾವು ಬಾಳಬೇಕು ಎಂದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ರಾಯಚೂರಿನಲ್ಲಿ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳಲು ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದವರು ಪ್ರತಿದಿನ ಶಿವರಾತ್ರಿ ದಿನದಂದು ಈ ರೀತಿ ಲಿಂಗದರ್ಶನ ಮತ್ತು ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಲ್ಪಿಸುತ್ತಿದೆ ಎಂದರು.
ನಗರದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಾನಿಲಯ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ನಾವು ಸದಾ ಬೆಂಬಲವಾಗಿ ಇರುತ್ತೇವೆ. ಅವರ ಮಾರ್ಗದರ್ಶನ ಸದಾ ನಮಗೆ ಇರಲಿ ಎಂದರು.
ವಿಧಾನಪರಿಷತ್ನ ಮಾಜಿ ಸದಸ್ಯ ಎನ್.ಎಸ್.ಬೋಸರಾಜ ಮಾತನಾಡಿ, ಪ್ರತಿಯೊಬ್ಬರಲ್ಲಿ ಸುಖ ಮತ್ತು ಶಾಂತಿ ಸಿಗಲು ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಬಹಳ ಅವಶ್ಯಕವಾಗಿದೆ. ಪ್ರತಿ ವರ್ಷ ಬ್ರಹ್ಮಕುಮಾರಿ ವಿಶ್ವವಿದ್ಯಾಾನಿಲಯ ವತಿಯಿಂದ ಈ ರೀತಿಯ ಕಾರ್ಯಕ್ರಮಗಳು ರಾಯಚೂರು ಜನರ ಜೀವನದಲ್ಲಿ ಬದಲಾವಣೆ ತಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವದಲ್ಲಿ ಶಾಂತಿ ಸಾರಲು ಈ ಸಂಸ್ಥೆ ಹಮ್ಮಿಕೊಳ್ಳುವ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೆ ತಮ್ಮ ಬೆಂಬಲ ಇದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಮನುಷ್ಯನು ಅಷ್ಟ ಮದಗಳನ್ನು ಹಾಗೂ ಆರು ದುರ್ಗುಣಗಳನ್ನು ಬಿಟ್ಟು ಧ್ಯಾಾನದಲ್ಲಿ ತೊಡಗಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ. ಆ ದಿಸೆಯಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯ ಹಮ್ಮಿಕೊಳ್ಳುವ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ತುಂಬಾ ಉಪಯುಕ್ತ ಎಂದರು.
ಶಿಕ್ಷಣ ಅಧಿಕಾರಿ ಇಂದಿರಾ ಅವರು ಮಾತನಾಡಿ, ಗುರು ಎಂಬ ಅರಿವು ನಮ್ಮಲ್ಲಿಯೇ ಅಂತರ್ಗತವಾಗಿದೆ. ಅದನ್ನು ತಿಳಿಯುವ ಮೂಲಕ ಸುಖ, ಶಾಂತಿ, ನೆಮ್ಮದಿ ಪಡೆಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಲಲಿತಾ ಕಡಗೋಳ ಸೇರಿದಂತೆ ಬಸವರಾಜ ಕಳಸ, ಜಿ.ಶಿವಮೂರ್ತಿ, ಕಡಗೋಳ ಆಂಜಿನೇಯ್ಯ, ನಾಗರಾಜ ಮಸ್ಕಿ, ರವಿ ಜಲ್ದಾರ್, ನಗರಸಭೆ ಸದಸ್ಯ ಶಶಿರಾಜ, ಆರ್ಡಿಎ ಮಾಜಿ ಅಧ್ಯಕ್ಷ ಗೋಪಾಲರೆಡ್ಡಿ, ದೇವಣ್ಣ ನಾಯಕ, ಹರೀಶ ನಾಡಗೌಡ, ಬಿ.ವೆಂಕಟಸಿಂಗ್ ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ದಂಡಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.