ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.23: ತಾಲ್ಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಸಮೇತನಹಳ್ಳಿ ಗ್ರಾಮದ ಅನ್ನಪೂರ್ಣ ಶಂಕರ್ ಹಾಗೂ ಉಪಾಧ್ಯಕ್ಷರಾಗಿ ತಿರುಮಲಶೆಟ್ಟಿಹಳ್ಳಿ ಗ್ರಾಮದ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 23 ಸದಸ್ಯರ ಹಾಗೂ ಕಾಂಗ್ರೆಸ್ ಬೆಂಬಲಿತ 8 ಸದಸ್ಯರ ಸಂಖ್ಯಾಬಲ ಇತ್ತು. ಬಹುಮತ ಇರುವ ಬಿಜೆಪಿ ಬೆಂಬಲಿತ ಅನ್ನಪೂರ್ಣ ಶಂಕರ್ ಒಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ
ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರನ್ನಾಗಿ ಹಾಗೂ ತಿರುಮಲಶೆಟ್ಟಿಹಳ್ಳಿ ರಾಜಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣೆ ಅಧಿಕಾರಿ ಚಂದ್ರಶೇಖರ್ ಘೋಷಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಕೊರಳೂರು ನಾರಾಯಣಸ್ವಾಮಿ ಮಾತನಾಡಿ, ಈ ಪಂಚಾಯ್ತಿ ಬಿಜೆಪಿ ಬೆಂಬಲಿತ ಅದ್ಯಕ್ಷರನ್ನಾಗಿ ಮೂರನೇ ಬಾರಿಗೆ ಆಯ್ಕೆ ಮಾಡುತ್ತಿದ್ದು ಇಲ್ಲಿ ಪಕ್ಷ ಭೇದ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದೇವೆ. ಅದೇ ರೀತಿ ಈ ಬಾರಿಯ ಅವಧಿಗೆ ನಮ್ಮ ಮಾಜಿ ಸಚಿವರು
ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರಾದ ಎಂ.ಟಿ.ಬಿ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಶ್ರಮ ವಹಿಸಬೇಕು ಎಂದರು.
ನೂತನ ಅಧ್ಯಕ್ಷೆ ಅನ್ನಪೂರ್ಣಶಂಕರ್ ಮಾತನಾಡಿ, ಈ ಹಿಂದೆ ಇದ್ದಂತಹ ಅಧ್ಯಕ್ಷರು ತಮ್ಮ ಶಕ್ತಿ ಮೀರಿ ಪಂಚಾಯಿತಿ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಅದರಂತೆ ನಾವು ಸಹ ಗ್ರಾಮಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಇನ್ನು ಹೆಚ್ಚಿನ ರೀತಿಯಲ್ಲಿ ಗ್ರಾಮಗಳ ಅಭಿವೃದ್ದಿ ಮಾಡಲು ಎಲ್ಲಾ ಸದಸ್ಯರ ಜೊತೆ ಚರ್ಚೆ ನಡೆಸಿ ನಮ್ಮ ಸಮೇತನಹಳ್ಳಿ ಗ್ರಾಮ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿಯನ್ನಾಗಿ ಮಾರ್ಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗು ಬಿಜೆಪಿ ಮುಖಂಡರಾದ ಕೊರಳೂರು ನಾರಾಯಣಸ್ವಾಮಿ, ಶಂಕರೇಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಮೇತನಹಳ್ಳಿ ಉಮೇಶ್, ಕೊರಳೂರು ಕವಿತ ರಮೇಶ್, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಪಿಡಿಓ ಪ್ರಸಾದ್, ತಿರುಮಲಶೆಟ್ಟಿಹಳ್ಳಿ ಚಿಕ್ಕಣ್ಣ, ಸೇರಿದಂತೆ ಹಲವಾರು ಮುಖಂಡರು ಗ್ರಾಮಸ್ಥರು ಹಾಜರಿದ್ದರು.