ಮಡಿಕೇರಿ, ಆ. 26: ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ, ಇದನ್ನು ತಿರಸ್ಕರಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆದಾಗ್ಯೂ ಕೇಂದ್ರ ಸರ್ಕಾರ ನಿವೃತ್ತಿ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿದ್ದು, ಈ ಸಮಿತಿಗೆ ರಾಜ್ಯದ ಪಶ್ಚಿಮ ಘಟ್ಟದ ಎಲ್ಲ ಬಾಧ್ಯಸ್ಥರನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚೆಗೆ ಸಂಜಯ್ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದಾಗ, ನೀವು ಕೊಡುಗು, ಹಾಸನ, ಮಂಗಳೂರು, ಉಡುಪಿ ಚಾಮರಾಜನಗರ ಮೊದಲಾದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನವಸತಿಯಲ್ಲಿರುವ ನಿವಾಸಿಗಳೊಂದಿಗೆ ಸಮಾಲೋಚಿಸಿ ನಂತರ ವರದಿ ಸಿದ್ಧಪಡಿಸಬೇಕು ಎಂದು ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪರಿಸರ ಉಳಿಯಬೇಕು. ಈ ಕಾರ್ಯವನ್ನು ಪಶ್ಚಿಮ ಘಟ್ಟದ ಜನರು ಮಾಡುತ್ತಿದ್ದಾರೆ. ಆದಗ್ಯೂ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಉಳಿಸಲು ಈ ಸಮಿತಿ ರಚಿಸಿದೆ. ಕಸ್ತೂರಿ ರಂಗನ್ ವರದಿ 10 ವರ್ಷ ಹಳೆಯದಾಗಿದ್ದರೆ, ಗಾಡ್ಗೀಳ್ ಅವರದಿ ಅದಕ್ಕಿಂತ ಹಳೆಯದು. ಪ್ರಸಕ್ತ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ವರದಿಯಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸರ್ಕಾರದ ನಿಲುವಾಗಿದೆ.
ಎಲ್ಲರೂ ಒಪ್ಪುವಂತಹ ವರದಿ ಬಂದರೆ ಶಾಸಕರೊಂದಿಗೆ, ಬಾಧ್ಯಸ್ಥರೊಂದಿಗೆ ಮತ್ತು ಸಚಿವ ಸಂಪುಟದ ಉಪ ಸಮತಿಯಲ್ಲಿ ಚರ್ಚಿಸಿ ಅಂತಿಮವಾಗಿ ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ತಾವು ಪಶ್ಚಿಮಘಟ್ಟದ ಜೀವಸಂಕುಲ, ಸಸ್ಯ ಸಂಕುಲ ಉಳಿಸಲು ಸರ್ಕಾರ ಬದ್ಧ ಎಂದು ನೀಡಿದ್ದ ಹೇಳಿಕೆ ತಿರುಚಲಾಗಿತ್ತು. ಪರಿಸರ ಪ್ರಕೃತಿ, ಪಶ್ಚಿಮ ಘಟ್ಟದ ಜೀವ ಮತ್ತು ಸಸ್ಯ ಸಂಕುಲ ಉಳಿಯಬೇಕು ಇದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಕೊಡಗು ಮತ್ತೆ ಕಾಂಗ್ರೆಸ್ ಭದ್ರಕೋಟೆ:
ಒಂದು ಕಾಲದಲ್ಲಿ ಕೊಡಗು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 25 ವರ್ಷಗಳ ಬಳಿಕ ಈಗ ಮತ್ತೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮುಂಬರುವ ಪಂಚಾಯ್ತಿ, ಪುರಸಭೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆ ಆಗುತ್ತದೆ. ಕೊಡಗು ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಿದ್ಯುತ್ ಬಿಲ್ ನಲ್ಲಿ 200 ಯುನಿಟ್ ವರಗೆ ಬಳಕೆಯ ಸರಾಸರಿ ಆಧಾರದಲ್ಲಿ ವಿನಾಯಿತಿ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಮಾಡಲು ಯತ್ನಿಸಿತು. ಆದರೆ ನಾವು ಅಕ್ಕಿಗೆ ಬದಲಾಗಿ ಹಣವನ್ನೇ ನೇರ ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತಿದ್ದೇವೆ. ಇದೇ 30ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಅವರು ಮೈಸೂರಿನಲ್ಲಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಮಹತ್ವಾಕಾಂಕ್ಷೆ ಯೋಜನೆಯಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಮಂಥರ ಗೌಡ ಮತ್ತಿತರರು ಭಾಗಿಯಾಗಿದ್ದರು.