ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.14: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮೊತ್ತವನ್ನು 50 ಲಕ್ಷ ರೂಪಾಯಿಗಳಿಂದ 1.00 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 2023ಕ್ಕೆ ತಿದ್ದುಪಡಿ ಮಾಡಿದ ವಿಧೇಯಕಕ್ಕೆ ಕರ್ನಾಟಕ ವಿಧಾನಸಭೆ ಇಂದು ಧ್ವನಿಮತದಿಂದ ಅಂಗೀಕಾರ ನೀಡಿದೆ.
ಮುಖ್ಯಮಂತ್ರಿಗಳ ಪರವಾಗಿ ಸದನದಲ್ಲಿ ವಿಧೇಯಕವನ್ನು ಅಂಗೀಕಾರಕ್ಕೆ ಮಂಡಿಸಿದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಎಚ್.ಕೆ. ಪಾಟೀಲರವರು ತಿದ್ದುಪಡಿ ಮಸೂದೆಯ ಸಂಕ್ಷಿಪ್ತ ವಿವರಗಳನ್ನು ಮತ್ತು ಮಸೂದೆಯ ಮಂಡನೆಯ ನಂತರ ನಡೆದ ಚರ್ಚೆಗೆ ಸದನದಲ್ಲಿ ಉತ್ತರಿಸಿದರು.
ಸದನದಲ್ಲಿ ಚರ್ಚೆಗೆ ಉತ್ತರಿಸಿದ ಸಚಿವರು ಈ ಮೊದಲಿನ 50 ಲಕ್ಷ ರೂಪಾಯಿಯ ಅವಕಾಶ ಕಲ್ಪಿಸಿದ ತಿದ್ದುಪಡಿಯ ನಂತರ ಮೊದಲನೇ ಟೆಂಡರ್ ಕರೆಯಲು ಶೇ.62 ರಷ್ಟು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪಂಗಡದವರು ಟೆಂಡರ್ಗಳಲ್ಲಿ ಪಾಲ್ಗೊಂಡಿದ್ದು, 2ನೇ ಕರೆಯಲ್ಲಿ ಶೆ. 80ರಷ್ಟು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಪಂಗಡದವರು ಪಾಲ್ಗೊಂಡಿದ್ದಾರೆ ಎಂದು ಸದನಕ್ಕೆ ವಿವರಿಸಿದರು.
ಈ ವೇಳೆ ಮಾತನಾಡಿದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುತ್ತಿಗೆ ಮೊತ್ತವನ್ನು ಹೆಚ್ಚಳ ಮಾಡುವುದನ್ನು ನಾವು ಕಳೆದ ಬಜೆಟ್ನಲ್ಲಿ ಸಹ ಹೇಳಿದ್ದೆವು. ಇಂದು ಇಂದಿನ ದರಗಳಿಗೆ ಹೋಲಿಕೆ ಮಾಡಿದರೆ ಅನಿವಾರ್ಯ ಸಹ ಇದೆ. ಅದೇ ರೀತಿ ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಗೆ ಸಹ ಪ್ರೋತ್ಸಾಹ ಕೊಡಬೇಕು ಎಂದು ಹೇಳಿದರು.
ಆರಗ ಜ್ಞಾನೇಂದ್ರ ಮಾತನಾಡಿ, ಗುತ್ತಿಗೆ ಪರಿಶಿಷ್ಟ ಜಾತಿ ಮತ್ತುಪಂಗಡದವರ ಹೆಸರಿನಲ್ಲಿ ಪಡೆದು ಅದನ್ನು ಸಾಮಾನ್ಯ ವರ್ಗದವರು ಉಪಗುತ್ತಿಗೆ ಪಡೆದು ಅವರು ನಿರ್ವಹಣೆ ಮಾಡುತ್ತಾರೆ. ಇದಕ್ಕಾಗಿ ಶೇ 2-3ರಷ್ಟು ಕಮಿಷನ್ ಮಾತ್ರ ಪಡೆಯುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೇವಲ ಗುತ್ತಿಗೆ ನೀಡುವುದರ ಜೊತೆಗೆ ರೋಡ್ರೋಲರ್, ಕಾಂಕ್ರಿಟ್ ಮಿಕ್ಸಿಂಗ್ನಂತಹ ಉಪಕರಣಗಳನ್ನು ಖರೀದಿಗೆ ಪ್ರೋತ್ಸಾಹ ನೀಡಬೇಕು. ಬಹುತೇಕ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟರೂ ಸಹ ಅವರಲ್ಲಿ ಹಣ ಇಲ್ಲದ ಕಾರಣ ಅದು ಬೇರೆಯವರಿಗೆ ಕೊಡುತ್ತಿದ್ದಾರೆ. ಇದು ತಪ್ಪಬೇಕು ಎಂದು ಹೇಳಿದರು.
ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ದೊಡ್ಡ ದೊಡ್ಡ ಗುತ್ತಿಗೆಗಳನ್ನು ನೀಡಿದಾಗ ಮೊಬಿಲೈಸೇಷನ್ ಅಡ್ವಾನ್ಸ್ ಎಂದು ಶೇ.25ರಷ್ಟು ಗುತ್ತಿಗೆ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿ ಎಸ್ಸಿಎಸ್ಟಿ ಗುತ್ತಿಗೆಗಳಲ್ಲಿ ಸಹ ಒಂದಷ್ಟು ಮೊತ್ತವನ್ನು ಮೊದಲೇ ಬಿಡುಗಡೆ ಮಾಡುವುದರಿಂದ ಹೆಚ್ಚಿನ ಜನರು ಇದರ ಲಾಭ ಪಡೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ, ಗುತ್ತಿಗೆ ಪಡೆಯುವವರಿಗೆ ಅಂಬೇಡ್ಕರ್ ಮತ್ತು ಜಗಜೀವನ್ರಾಂ ಅಭಿವೃದ್ಧಿ ನಿಗಮಗಳಿಂದ ತಾತ್ಕಾಲಿಕ ಸಾಲದ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.
ಬಳಿಕ ಉತ್ತರಿಸಿದ ಸಚಿವ ಎಚ್.ಕೆ. ಪಾಟೀಲ್, ಮುಂಗಡ ಗುತ್ತಿಗೆ ಮೊತ್ತ ನೀಡುವುದು, ಯಂತ್ರಗಳನ್ನು ಒದಗಿಸುವುದು ಮತ್ತು ಸಾಲ ಸೌಲಭ್ಯ ನೀಡುವಂತಹ ಉಪಯುಕ್ತ ಸಲಹೆಗಳನ್ನು ಸದಸ್ಯರು ನೀಡಿದ್ದಾರೆ. ಇವುಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಸಾಧ್ಯವಾದವುಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವರ ವಿವರಣೆ ಮತ್ತು ಉತ್ತರದ ನಂತರ ವಿಧಾನಸಭೆ ಈ ವಿಧೇಯಕವನ್ನು ಧ್ವನಿ ಮತದಿಂದ ಅಂಗೀಕರಿಸಿತು.