ಸುದ್ದಿಮೂಲ ವಾರ್ತೆ
ತುಮಕೂರು, ಮೇ 26: ಜಿಲ್ಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಮೇ 29ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಮೊದಲನೇ ದಿನವೇ ಶಾಲೆಗೆ ಕಳುಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತಾಯಲದ ಮಾರ್ಗಸೂಚಿಯಂತೆ ಈಗಾಗಲೇ ಶಾಲಾ ಹಂತ, ಕ್ಲಸ್ಟರ್ ಹಂತ,
ತಾಲ್ಲೂಕು ಹಂತ ಸೇರಿದಂತೆ ಜಿಲ್ಲಾ ಕಚೇರಿಯಲ್ಲಿ ಸಭೆಗಳನ್ನು ನಡೆಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ವಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ಶಾಲೆ ಪ್ರಾರಂಭವಾಗುವ ಮೇ 29ರಂದು ಹಬ್ಬದ ರೀತಿಯಲ್ಲಿ ಶಾಲೆಯನ್ನು ಅಲಂಕರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ ಶಾಲಾ ಮಕ್ಕಳಿಗೆ ಸಿಹಿಯೂಟ ಸಿದ್ಧಪಡಿಸಲಾಗುವುದು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚನೆ ನೀಡಿರುವಂತೆ ಎಲ್ಲಾ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶಾಲೆಯನ್ನು ನಡೆಸುವ ಹಾಗೂ ಯೋಗ್ಯವಲ್ಲದ ಕೊಠಡಿಗಳನ್ನು ಬಳಸದಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲಾ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.
ಶಾಲಾ ಪ್ರಾರಂಭದ ದಿನದಂದು 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು
ಪೋಷಕರಲ್ಲಿ ಮನವಿ ಮಾಡಲಾಗಿದೆ. ಈಗಾಗಲೇ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿತರಣೆಯಾಗಿರುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಬಳಕೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.