ಸುದ್ದಿಮೂಲ ವಾರ್ತೆ
ಮೈಸೂರು, ಸೆ.21:ತಮಿಳುನಾಡಿಗೆ ಐದು ಸಾವಿರ ಕ್ಯುಸೆಕ್ಸ್ ಬಿಡಬೇಕೆಂಬ ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ವಿಶೇಷವಾಗಿ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ರೈತರು ಬೀದಿಗಿಳಿದಿದ್ದಾರೆ. ಅಲ್ಲಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪೊಲೀಸರು ಮೈಸೂರಿನ ಕಾಡಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ರೈತರನ್ನು ಬಂಧಿಸಿದರು. ಅದರಲ್ಲೂ ಮಂಡ್ಯದಲ್ಲಿ ಪ್ತತಿಭಟನೆ ಕಾವು ಹಿಂದಿಗಿಂತ ಹೆಚ್ಚಾಗಿದೆ. ಹಾಸನ, ಚಾಮರಾಜನಗರದ ಜಿಲ್ಲೆ ಸೇರಿದಂತೆ ಆನೇಕ ಕಡೆ ಪ್ರತಿಭಟನೆಗಳ ಸರಮಾಲೆಯೇ ಮುಂದುವರಿದಿದೆ.
ರಾಜ್ಯದಲ್ಲಿ ವ್ಯಾಪಕ ಮಳೆಯಾಗದೇ ಕಬಿನಿ, ಕೆಆರ್ ಎಸ್ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದಾಗಿ ಕುಡಿಯಲು ನೀರು ಸಿಗದಂತಹ ಸ್ಥಿತಿ ತಲೆದೂರಲಿದೆ. ಇದರಿಂದಾಗಿ ಈಗಾಗಲೇ ಸರ್ಕಾರ 193 ತಾಲ್ಲೂಕುಗಳನ್ನ ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಇಂತಹ ಪರಿಸ್ಥಿತಿ ಇದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ.
ಮಂಡ್ಯ ಬಂದ್
ಕೃಷ್ಣರಾಜಸಾಗರ ಜಲಾಶಯದ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂನ ಮುಖ್ಯ ದ್ವಾರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಬೈಕ್ ರ್ಯಾಲಿ ಮೂಲಕ ಆಕ್ರೋಶ ಹಾಕುತ್ತಿದ್ದರೇ, ಇತ್ತ ಹಿರಿಯ ಜೀವಗಳು ಕಣ್ಣೀರು ಹಾಕುತ್ತಾ ಆಕ್ರೋಶದ ಮಾತುಗಳನ್ನು ಹೊರಹಾಕುತ್ತಿದ್ದಾರೆ. ಸೆಪ್ಟಂಬರ್ 23ಕ್ಕೆ ಮಂಡ್ಯ ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದೆ..ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಮಂಡ್ಯ ಜಿಲ್ಲಾ ಬಂದ್ ಸಂಬಂಧ ನಾಳೆ ರಾಜಕೀಯ, ಪಕ್ಷಗಳ ನಾಯಕರುಗಳು, ವರ್ತಕರು ಸಂಘಟನೆ ಮುಖಂಡರ ಜತೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಬಂದ್ ರೂಪುರೇಷೆ ಬಗ್ಗೆ ನಿರ್ಧರಿಸಲಿದೆ.
ಹೆದ್ದಾರಿ ತಡೆದು ಪ್ರತಿಭಟನೆ
ಇನ್ನೊಂದೆಡೆ ರೈತಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ನುಸುಳಿ ಹೋಗುತ್ತಿದ್ದ ಕಾರು ಚಾಲಕನಿಗೆ ರೈತರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಕೂಡ ನಡೆದಿದೆ.
ಕಾಡಾ ಕಚೇರಿಗೆ ಬೀಗ
ಕಾಡಾ ಕಚೇರಿಗೆ ಬೀಗ ಹಾಕಿ ನಾನಾ ನಾನಾ ರೈತ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು.ಪ್ರತಿಭಟನೆ ಒಂದು ಹಂತದಲ್ಲಿ ಜೋರಾಗಿ ಕಾಡಾ ಕಚೇರಿಗೆ ಬೇಗ ಜಡಿಯಲು ಪ್ರತಿಭಟನಾ ನಿರತರು ಯತ್ನಿಸಿದರು.ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಶಾಂತಿಯುತವಾಗಿ ಹೋರಾಟ ನಡೆಸುವಂತೆ ಸೂಚಿಸಿದರು.
ಪೊರಕೆ ಚಳುವಳಿ
ಕನ್ನಡ ಸಂಘಟನೆಯಿಂದ ಜಿಲ್ಲಾ ಪಂಚಾಯ್ತಿ ಬಳಿ ಪೊರಕೆ ಹಿಡಿದು ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ವಿಜಯೇಂದ್ರ, ಕೃಷ್ಣಯ್ಯ, ಶಾಂತರಾಜೇಅರಸ್, ನರಸಿಂಹೇಗೌಡ, ಗಿರೀಶ್, ಯಶ್ವಂತ್, ಆರ್ ಮಹಾದೇವ ಸ್ವಾಮಿ, ನೇಹಾ, ಸೋಮಶೇಖರ್, ನಾಗಣ್ಣ, ಎಳನೀರು ರಾಮಣ್ಣ, ದರ್ಶನ್, ಹರೀಶ್, ಕುಮಾರ್ ಗೌಡ, ಶ್ರೀನಿವಾಸ ರಾಜಕುಮಾರ್, ಅನಿಲ್, ಹನುಮಂತಯ್ಯ, ಗಣೇಶ್ ಪ್ರಸಾದ್, ಬಸವರಾಜು ಮಿನಿ ಬಂಗಾರಪ್ಪ, ಪ್ರದೀಪ್, ದಿಲೀಪ್, ಸುಬ್ಬೇಗೌಡ, ಕೃಷ್ಣಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.