ಕಲಬುರಗಿ, ಏ.13 : ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿಯೂ ಜಿಲ್ಲೆಯ ಸೇಡಂ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿಲ್ಲ. ಸೇಡಂನಲ್ಲಿ ಹಾಲಿ ಬಿಜೆಪಿಯ ರಾಜಕುಮಾರ ಪಾಟೀಲ್ ಅವರು ಶಾಸಕರಾಗಿದ್ದು, ಎರಡನೇ ಪಟ್ಟಿಯಲ್ಲಿಯೂ ಅವರ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲೇ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಐವರು ಹಾಲಿ ಶಾಸಕರಲ್ಲಿ ನಾಲ್ವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಸೇಡಂನ ಹಾಲಿ ಶಾಸಕ ರಾಜಕುಮಾರ ಪಾಟೀಲ್ ಅವರ ಹೆಸರು ಮೊದಲ ಹಾಗೂ ಎರಡನೇ ಪಟ್ಟಿಯಲ್ಲೂ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶಾಸಕ ರಾಜಕುಮಾರ ಪಾಟೀಲ್ ಅವರು ಕೆಕೆಆರ್ಟಿಸಿ ಅಧ್ಯಕ್ಷರಾಗಿ, ಕಲಬುರಗಿ -ಯಾದಗಿರಿ ಡಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಸೇಡಂ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕರೆಸಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದರು. ಆದರೂ ಸಹ ತೆಲ್ಕೂರ್ ಅವರ ಹೆಸರು ಘೋಷಣೆ ಯಾಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಮಧ್ಯೆ ಸೇಡಂ ಕ್ಷೇತ್ರದಿಂದ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರ ಪತ್ನಿ ಸಂತೋಷ ರಾಣಿ ಪಾಟೀಲ್ ತೆಲ್ಕೂರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಸಂತೋಷಿರಾಣಿ ಪಾಟೀಲ್ ಅವರು ಕ್ಷೇತ್ರದಲ್ಲಿ ಮಹಿಳಾ ಸಹಕಾರಿ ಸಂಘದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಡಿದ್ದು, ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಟಿಕೆಟ್ “ರಾಜ”ಕುಮಾರ ಪಾಟೀಲ್ ಅವರಿಗೊ ಅಥವಾ ಸಂತೋಷಿ”ರಾಣಿ” ಪಾಟೀಲ್ ಅವರಿಗೊ ಎಂಬುವುದಕ್ಕೆ ಮೂರನೇ ಪಟ್ಟಿ ಬಿಡುಗಡೆವರೆಗೂ ಕಾಯಬೇಕಿದೆ.