ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಏ.27: ಕಳೆದ 10 ವರ್ಷದಲ್ಲಿ ತಾವು ಮಾಡಿರುವ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಮತ ಯಾಚನೆ ಮಾಡುತ್ತಿದ್ದು, ಈ ಹಿಂದೆ ಶಾಸಕರಾಗಿದ್ದವರು ಏನು ಮಾಡಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ತಾಲೂಕಿನ ಹಾರೋಬಂಡೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ ಅವರು, 2008 ರಿಂದ 2013 ರವರೆಗೆ ಶಾಸಕರಾಗಿದ್ದವರು ಈಗ ಮತ ಕೇಳಲು ಬರುತ್ತಿದ್ದಾರೆ, ಅವರು ಐದು ವರ್ಷದಲ್ಲಿ ಏನು ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ, 2013ರಿಂದ ತಾವು ಏನು ಮಾಡಿದ್ದೇನೆ ಎಂಬುದು ನಿಮ್ಮ ಮುಂದಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಹೇಳಲು ಏನೂ ಇಲ್ಲ ಎಂದು ಅವರು ಹೇಳಿದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಜೀವಂತವಾಗಿರುತ್ತವೆ, ಬಡ ರೈತರು ಕೊಳವೆ ಬಾವಿಗಳನ್ನು ಕೊರೆಯಿಸಿ ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ತಾವು ಕೊಟ್ಟ ಮಾತಿನಂತೆ ಕೆರೆಗಳನ್ನು ತುಂಬಿಸಿದ್ದೇನೆ, 1,400 ಕೋಟಿ ವೆಚ್ಚದ ಎಚ್ಎನ್ ವ್ಯಾಲಿ ನೀರು ತಂದು ಈ ಬಾಗದ ಕೆರೆಗಳಿಗೆ ನೀರು ತುಂಬಿಸಲಾಗಿದೆ, ನಂದಿ ಬೆಟ್ಟಕ್ಕೆ ರೋಪ್ ವೇ, ವೈದ್ಯಕೀಯ ಕಾಲೇಜು ನಿರ್ಮಾಣ ಹೀಗೆ ತಮ್ಮ ಸಾಧನೆಗಳು ನಿಮ್ಮ ಕಣ್ಣ ಮುಂದಿದೆ ಎಂದರು.
ಕಳೆದ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಬಡವರ ಬಗ್ಗೆ ವಿಚಾರಿಸಲೇ ಇಲ್ಲ, ಈಗ ದೇಶದ ಬಡವರ ಮನೆಗೆ ನಲ್ಲಿ ನೀರು ನೀಡುವ ಕೆಲಸ ಮಾಡಿರುವುದು ಬಿಜೆಪಿ. ಜೆಡಿಎಸ್ ನವರು ಒಕ್ಕಲಿಗ, ರೈತ ನಾಯಕ ಎಂದು ಹೇಳುತ್ತಾರೆ, ಆದರೆ ಕುಮಾರಣ್ಣ ಮೀಸಲಾತಿ ನೀಡಿದರೆ ಎಂದು ಪ್ರಶ್ನಿಸಿದ ಸಚಿವರು, ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ಒಳ ಮೀಸಲಾತಿ ನೀಡಿದ್ದು, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಎಂದು ಹೇಳಿದರು.
ಈ ಯಾವುದನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮತ ಕೇಳುವ ನೈತಿಕತೆ ಇದೆಯಾ, ಇವನ್ನು ನೀಡದ ನೀವು ಮತ ಕೇಳಲು ನೈತಿಕತೆ ಇಲ್ಲ ಎಂದು ಹೇಳಬೇಕು, ಈ ಚುನಾವಣೆಯಲ್ಲಿ ಗೆಲುವಿನ ಅಂತರ ಮುಖ್ಯವಾಗಿದ್ದು, ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.
ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆವಿ ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ ನವೀನ್ ಕಿರಣ್, ಮಾಜಿ ಶಾಸಕಿ ಅನುಸೂಯಮ್ಮ ಮತ್ತಿತರರು ಉಪಸ್ಥಿತರಿದ್ದರು.