ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಸೆ. 19 : ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸೀಕಲ್ ರಾಮಚಂದ್ರ ಗೌಡ ಮನವಿ ಮಾಡಿದರು.
ನಗರದ ಸೇವಾಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಇಡೀ ವಿಶ್ವದಲ್ಲಿ ಪರಿಚಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲರ ಸಹಕಾರ ಮತ್ತು ಸಬ್ ಕಾ ಸಾಥ್ ಮತ್ತು ಸಬ್ ಕಾ ವಿಕಾಸ್ ಘೋಷಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದಾರೆ.
ಯೋಗ ವಿಶ್ವಮಾನ್ಯತೆ ಹೊಂದಿದೆ ಅದೇ ರೀತಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಮೂಲಕ ಪ್ರತಿಯೊಬ್ಬ ನಾಗರಿಕರಿಗೆ 5 ಲಕ್ಷ ವರೆಗೆ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುವ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಲಾಗಿದೆ ಬಡವರಿಗಾಗಿ ಇಂತಹ ಯೋಜನೆ ಎಲ್ಲಿಯೂ ಇಲ್ಲ ಎಂದು ಬಣ್ಣಿಸಿದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ ಕೇವಲ ಮೂರನೇ ಒಂದು ಭಾಗದ ಜನರಿಗೆ ತಲುಪುತ್ತಿದೆ. ಇನ್ನೂ ಶೇ 75 ರಷ್ಟು ಮಂದಿ ಈ ಯೋಜನೆಗಳಿಂದ ವಂಚಿತಗೊಂಡಿದ್ದಾರೆ ಎಂದು ದೂರಿದ ಅವರು, ಬಡವರಿಗೆ ಗ್ಯಾರಂಟಿಗಳಿಂದ ಯಾವುದೇ ಪ್ರಯೋಜನವಿಲ್ಲ. ಗೃಹ ಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗಿಲ್ಲ. ಮಹಿಳೆಯರು ಬ್ಯಾಂಕ್ ಮತ್ತು ಸೈಬರ್ ಕೇಂದ್ರಗಳಿಗೆ ಅಲೆದಾಡುವಂತೆ ಮಾಡಿ ತೊಂದರೆ ಕೊಟ್ಟಿದ್ದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಸಮೀಪ ಇರುವ ಶಿಡ್ಲಘಟ್ಟ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃಧ್ಧಿ ಹೊಂದಿಲ್ಲ ಅದಕ್ಕಾಗಿ ಹೋರಾಟವನ್ನು ಮಾಡುತ್ತೇನೆ. ಕ್ಷೇತ್ರವನ್ನು ಶೈಕ್ಷಣಿಕ ಮತ್ತು ಆರೋಗ್ಯವಾಗಿ ಅಭಿವೃದ್ಧಿ ಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.
ಪ್ರತಿ ತಿಂಗಳು ಆರೋಗ್ಯ ಶಿಬಿರ : ಕ್ಷೇತ್ರದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಂದ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಸೌಲಭ್ಯ ದೊರೆಯುತ್ತಿಲ್ಲ. ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸೇವಾ ಸೌಧ ಕಚೇರಿ ಬಳಿ ಅತ್ಯಾಧುನಿಕ ತುರ್ತು ಚಿಕಿತ್ಸಾ ಕೇಂದ್ರವನ್ನು ತೆರೆದು ಅದರ ಮೂಲಕ ಬಡವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಕೆಲಸವನ್ನು ಟ್ರೈಲೈಫ್ ಆಸ್ಪತ್ರೆಯ ಮೂಲಕ ಮಾಡುತ್ತೇನೆ. ಜೊತೆಗೆ ಕ್ಷೇತ್ರದ ಜನರ ಆರೋಗ್ಯವನ್ನು ಕಾಪಾಡಲು ಪ್ರತಿಯೊಂದು ತಿಂಗಳಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಬಿಜೆಪಿ ಯುವ ಮುಖಂಡ ಸೀಕಲ್ ಆನಂದ್ಗೌಡ ಮತ್ತಿತರರು ಉಪಸ್ಥಿತರಿದ್ದರು.