ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ , ಅ. 19 : ಕೃಷಿಯಲ್ಲಿ ತೊಡಗಿಸಿಕೊಂಡಷ್ಟೆ ಸಂಖ್ಯೆಯಲ್ಲಿ ರೇಷ್ಮೆ ಕೃಷಿ ಹಾಗೂ ಉದ್ದಿಮೆಯಲ್ಲೂ ಸಾವಿರಾರು ಕುಟುಂಬಗಳು ತೊಡಗಿಸಿಕೊಂಡಿವೆ. ಆದರೆ, ವಿದ್ಯುತ್ನ ಕಣ್ಣಾ ಮುಚ್ಚಾಲೆ ಆಟದಿಂದ ರೈತರು, ರೀಲರುಗಳು, ರೇಷ್ಮೆ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯುತ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ರೈತರು, ರೀಲರುಗಳು, ಕೂಲಿ ಕಾರ್ಮಿಕರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಇದೀಗ ಪೂರೈಸುತ್ತಿರುವ ವಿದ್ಯುತ್ತನ್ನು ನಿಯಮಿತವಾಗಿ ನೀಡುತ್ತಿಲ್ಲ. ವಿದ್ಯುತ್ ಅಗಾಗ್ಗೆ ಹೋಗಿ ಬರುವುದರಿಂದ ರೈತರು ಹೆಂಡತಿ ಮಕ್ಕಳು ಮನೆ ಬಿಟ್ಟು ಪಂಪ್ಸೆಟ್ ಶೆಡ್ ಬಳಿ ಮಲಗಿಕೊಳ್ಳುವಂತಾಗಿದೆ. ಇಷ್ಟಾದರೂ ಬೆಳೆಗಳು ಒಣಗುತ್ತಿವೆ ಎಂದರು.
ವಿದ್ಯುತ್ ಇದ್ದಕ್ಕಿದ್ದಂತೆ ಹೋಗುವುದರಿಂದ ರೇಷ್ಮೆ ನೂಲು ತುಂಡಾಗಿ ಗುಣಮಟ್ಟದ ರೇಷ್ಮೆ ನೂಲು ತೆಗೆಯಲು ಆಗುತ್ತಿಲ್ಲ.ಇದರಿಂದ ರೀಲರುಗಳು ಕಡಿಮೆ ಬೆಲೆಗೆ ರೇಷ್ಮೆ ನೂಲನ್ನು ಮಾರಾಟ ಮಾಡಿ ನಷ್ಟಕ್ಕೀಡಾಗುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ಅನೇಕ ನೂಲು ಬಿಚ್ಚಾಣಿಕೆ ಘಟಕಗಳು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಿದ್ದು, ನೂಲು ಬಿಚ್ಚಾಣಿಕೆದಾರ ಕೆಲಸಗಾರರು ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಹೆಣಗಾಡುವಂತಾಗಿದೆ ಎಂದು ಆಪಾದಿಸಿದರು.
ಅಕ್ಟೋಬರ್ನಲ್ಲೇ ಪರಿಸ್ಥಿತಿ ಈ ರೀತಿ ಆದರೆ ಮುಂದಿನ ಮಾರ್ಚ್, ಏಪ್ರಿಲ್ನಲ್ಲಿ ಪರಿಸ್ಥಿತಿಯನ್ನು ಈ ಸರಕಾರವು ನಿಭಾಯಿಸಲು ಸಾಧ್ಯವೇ ಇಲ್ಲ. ಗ್ಯಾರಂಟಿಗಳ್ನು ಸಮರ್ಪಕವಾಗಿ ಜಾರಿ ಮಾಡಲು ಹೆಣಗಾಡುತ್ತಿರುವ ಸರಕಾರವು ವಿದ್ಯುತ್ನ್ನು ಸಮರ್ಪಕವಾಗಿ ಪೂರೈಸುವ ಖಾತ್ರಿಯೆ ಇಲ್ಲ.
ಆದ್ದರಿಂದ, ಈಗಲೇ ಸರಕಾರ ಎಚ್ಚೆತ್ತು ವಿದ್ಯುತ್ ಸಮಸ್ಯೆ ಎದುರಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರು, ರೀಲರುಗಳು,ಕೂಲಿ ಕಾರ್ಮಿಕರನ್ನು ಉಳಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.