ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜೂ 17 : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಮತ್ತು ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಸಹಯೋಗದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳ ಮಾರಟ ಮೇಳ ಹಾಗೂ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸ್ವ-ಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸುವ ಉತ್ಪನ್ನಗಳು ಸಾಮಾನ್ಯರಿಗೂ ಸಹ ಕೈಗೆಟುಕುವಂತಹ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಿರುದ್ಯೋಗ ಮಹಿಳೆಯರಿಗೆ ಸ್ವಯಂ ಉದ್ಯೋಗ ಸೃಷ್ಟಿ ಮಾಡುತ್ತದೆ. ಸ್ವ-ಸಹಾಯ ಸಂಘದ ಮಹಿಳೆಯರಿಗೆ ಬ್ಯಾಂಕುಗಳಿಂದ ಪಡೆದ ಸಾಲಗಳ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ. ಅದೇ ರೀತಿಯಾಗಿ ಬಡತನ ನಿರ್ಮೂಲನೆಗಾಗಿ ಸ್ವಸಹಾಯ ಗುಂಪಿನ ಸದಸ್ಯರ ಸುಸ್ಥಿರ ಜೀವನೋಪಾಯವನ್ನು ರಚಿಸಲು ಮತ್ತು ನಿರ್ವಹಿಸಲು ಅನುಕೂಲವಾಗಿದೆ. ಸ್ವ-ಸಹಾಯ ಗುಂಪುಗಳು ಮತ್ತು ಸ್ವಯಂ ಉದ್ಯೋಗ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳ ಸಾಂಸ್ಥಿಕ ಹಣಕಾಸು ಸೇರಿದಂತೆ ನೀತಿ ರಚನೆ ಮತ್ತು ಸಮನ್ವಯ ಮಾಡಬೇಕು ಎಂದು ಹೇಳಿದರು.
ಗ್ರಾಮೀಣ ಮಹಿಳೆಯರ ಬದುಕಿನ ದಿಕ್ಕನ್ನು ಬದಲಾಯಿಸುವಲ್ಲಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಸ್ವಸಹಾಯ ಸಂಘಗಳು ಹಾಗೂ ಗ್ರಾಮಗಳ ಉದ್ಧಾರವೇ ಆಗಿವೆ. ಅದೇ ರೀತಿಯಾಗಿ ಸ್ವಾವಲಂಬನೆಯ ಜೀವನಕ್ಕೆ ಅಡಿಪಾಯ ಹಾಕುತ್ತಾ ಬೆಳೆಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ, ತಾಲ್ಲೂಕು ಪಂಚಾಯಿತಿ ಶಿಡ್ಲಘಟ್ಟ ಸಹಯೋಗದೊಂದಿಗೆ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಸ್ವ-ಸಹಾಯ ಸಂಘದವರು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ನೌತಾಜ್, ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಪ್ರಸಾದ್, ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ತಾಲ್ಲೂಕು ಸಂಯೋಜಕರಾದ ಲತಾ, ತಾಲ್ಲೂಕು ಸಂಯೋಜಕರು ನಟೇಶ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ವಿಜಯ್ ಕುಮಾರ್, ತಾಲ್ಲೂಕಿನ ವಲಯ ಮೇಲ್ವಿಚಾರಕರಾದ ಬಾಲರಾಜ.ಕೆ, ನರಸಿಂಹ ಸಿ.ಎನ್, ಮತ್ತು ನಳಿನಿ ಡಿ.ಇ.ಒ, ಭಾಗ್ಯಲಕ್ಷ್ಮಿ ಬಿ.ಆರ್.ಪಿ, ಅಮರಾವತಿ ವನಸಖಿ, ತಾಲ್ಲೂಕಿನ ಎಲ್ಲಾ ಎಂಬಿಕೆ ಮತ್ತು ಎಲ್ ಸಿ ಆರ್ ಪಿ ಗಳು, ಕೃಷಿ ಸಖಿಗಳು, ಪಶು ಸಖಿಗಳು, ವನ ಸಖಿಗಳು, ಕೃಷಿ ಉದ್ಯೋಗ ಸಖಿಯವರು ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.