ಹಣಕ್ಕಾಗಿ ನಿರಂತರ ಕಿರುಕುಳ – ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಸ್ವಾಭಿಮಾನಿ ದಲಿತ ಒಕ್ಕೂಟ ಸಮಿತಿ ಆಗ್ರಹ
ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ, 22; ಅಮಾಯಕ ಬ್ರಾಹ್ಮಣ ಕುಟುಂಬದ ವಯೋವೃದ್ಧರನ್ನು ವಂಚಿಸಿ ಅವರ ಬಳಿ ಇರುವ ಆರು ಎಕರೆ ಭೂಮಿ ಕಬಳಿಸಲು ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲಿತ ಸಂಘಟನೆಯ ಬಿ.ಆರ್. ಮುನಿರಾಜು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸ್ವಾಭಿಮಾನಿ ದಲಿತ ಒಕ್ಕೂಟ ಸಮಿತಿ ಆಗ್ರಹಿಸಿದೆ.
ಪೊಲೀಯೋ ಪೀಡಿತರಾದ 78 ವರ್ಷದ ಅರುಣ್ ಕುಮಾರ್ ಸಾಬು ಮತ್ತು 90 ವರ್ಷದ ಹಿರಿಯ ಜೀವ ವಿಜಯ ಕುಮಾರ್ ಸಾಬು ಅವರನ್ನು ಕಳೆದ ಮೂರು ತಿಂಗಳಿಂದ ಬೆದರಿಸಿ ತಮ್ಮ ಬಳಿ ಜಮೀನು ಖರೀದಿಗೆ ಸಂಬಂಧಪಟ್ಟಂತೆ ರೈತರಿಂದ ಒಪ್ಪಂದ ಪತ್ರ ಮಾಡಿಕೊಂಡಿದ್ದು, ಭೂಮಿಯ ಸ್ವಾಧೀನತೆಯನ್ನು ನಮಗೆ ಬಿಟ್ಟುಕೊಡುವಂತೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಜಮೀನಿನ ಬಳಿ ತಮಟೆ ಚಳವಳಿ ನಡೆಸಿ ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸುವುದಾಗಿ ಹೇಳಿ ಭೀತಿಯ ವಾತಾವರಣ ನಿರ್ಮಿಸಿದ್ದಾರೆ. ಇದರಿಂದ ಹಿರಿಯ ನಾಗರಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ದಿಕ್ಕೇ ತೋಚದಂತಾಗಿದ್ದಾರೆ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಕಿರುಕುಳಕ್ಕೆ ಒಳಗಾಗದ ಸಂತ್ರಸ್ತರು, ಭೂಮಿ ಮಾರಾಟ ಮಾಡಿದ ರೈತರ ಸಮ್ಮುಖದಲ್ಲಿ ಮಾತನಾಡಿದ ಸ್ವಾಭಿಮಾನಿ ದಲಿತ ಒಕ್ಕೂಟ ಸಮಿತಿ ರಾಜ್ಯಾಧ್ಯಕ್ಷ ಎಂ.ಲಿಂಗಣ್ಣ, ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬಿ.ಆರ್. ಮುನಿರಾಜು ದೌರ್ಜನ್ಯ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಶ್ರೀರಾಮನಹಳ್ಳಿ ಗ್ರಾಮದ ಸರ್ವೆ ನಂ. 33/14, 33/19 ರಲ್ಲಿ 31 ವರ್ಷಗಳ ಹಿಂದೆ ಈ ಸಹೋದರರು ಒಟ್ಟು ಆರು ಎಕರೆ ಜಮೀನು ಖರೀದಿಸಿದ್ದಾರೆ. ಇವರ ಹೆಸರಿನಲ್ಲಿ ಪಹಣಿ, ಖಾತೆ ಇದ್ದು ಈ ಭೂಮಿ ಈಗಲೂ ಇವರ ಅನುಭವದಲ್ಲಿದೆ. ಆದರೆ ಹಿರಿಯ ನಾಗಕರು ಮತ್ತು ಅಸಹಾಯಕರು ಎನ್ನುವ ಕಾರಣದಿಂದ ಬಿ.ಆರ್. ಮುನಿರಾಜು ಅವರು ಅರ್ಧ ಜಮೀನು ಲಪಟಾಯಿಸುವ ಇಲ್ಲವೆ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುವ ದುರುದ್ದೇಶದಿಂದ ಕಿರುಕುಳ ನೀಡುತ್ತಿದ್ದಾರೆ ಎಂದರು.
ಇಬ್ಬರು ಸಹೋದರರ ಜೊತೆಗೆ ಜಮೀನು ನೋಡಿಕೊಳ್ಳುತ್ತಿದ್ದ ಮಂಜುನಾಥ್ ಎಂಬುವರ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ದೂರಿಯಲ್ಲಿ ಯಾವುದೇ ಪುರಾವೆ ಇಲ್ಲ ಎನ್ನುವ ಕಾರಣದಿಂದ ಮೊದಲ ದೂರು ತಿರಸ್ಕರಿಸಲಾಗಿತ್ತು. ಇದೀಗ ಎರಡನೇ ಬಾರಿ ಇದೇ ರೀತಿಯಲ್ಲಿ ಪೊಲೀಸರ ಮೇಲೆ ಒತ್ತಡ ಹೇರಿ ಮತ್ತೊಮ್ಮೆ ಪ್ರಕರಣ ದಾಖಲಿಸಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಮತ್ತೊಂದು ದೂರು ಸಹ ಬಿದ್ದುಹೋಗಿದೆ ಎಂದರು.
ದಿನಾಂಕ 18 -03-2023 ರಂದು ಈ ಇಬ್ಬರು ಹಿರಿಯ ನಾಗರಿಕರನ್ನು ಬಿ.ಆರ್. ಮುನಿರಾಜು ಅವರು ಶೇಷಾದ್ರಿಪುರಂನ ಸಾಮ್ರಾಟ್ ಹೊಟೇಲ್ ಗೆ ಕರೆಸಿಕೊಂಡು ತಮ್ಮ ಬಳಿ ಜಮೀನು ಖರೀದಿ ಒಪ್ಪಂದದ ದಾಖಲೆಗಳಿದ್ದು, ನಮಗೆ ಅರ್ಧ ಜಮೀನು ನಮಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಕೇಳಿದಷ್ಟು ಹಣ ಕೊಡಬೇಕು ಎಂದು ಒತ್ತಡ ಹಾಕಿದ್ದರು. ಜಮೀನು ಮಾರಾಟದ ಒಪ್ಪಂದ ಪತ್ರದ ಬಗ್ಗೆ ಮಾಹಿತಿ ಕೇಳಿದರೆ ಇಲ್ಲಿಯವರೆಗೆ ಒದಗಿಸಿಲ್ಲ. ನಂತರ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಈ ಹಿರಿಯ ನಾಗಕರಿಕರು ನಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಮೂವರ ವಿರುದ್ಧ ಬಿ.ಆರ್. ಮುನಿರಾಜು ದೂರು ಸಲ್ಲಿಸಿದ್ದರು. ನಂತರ ಪೊಲೀಸರು ಪುರಾವೆ ಇಲ್ಲದ ಕಾರಣ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಇಷ್ಟಾದರೂ ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ಮುಂದುವರೆಸಿದ್ದಾರೆ ಎಂದು ಎಂ. ಲಿಂಗಣ್ಣ ಹೇಳಿದರು.
ಪೊಲೀಯೋ ಪೀಡಿತರಾದ ಹಿರಿಯ ನಾಗರಿಕರಾದ ಅರುಣ್ ಕುಮಾರ್ ಸಾಬು ಮಾತನಾಡಿ, ನಾವು ಕಾನೂನು ಬದ್ಧವಾಗಿ ಭೂಮಿ ಖರೀದಿಸಿದ್ದು, ಪ್ರತಿಯೊಂದು ದಾಖಲೆಗಳು ನಮ್ಮ ಹೆಸರಿನಲ್ಲಿವೆ. ನಮ್ಮ ದೈಹಿಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ನಮ್ಮಿಂದ ಜಮೀನು ಇಲ್ಲವೆ ಹಣ ಪಡೆಯಲು ಇಂತಹ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿರಿಯ ನಾಗರಿಕರಾದ ವಿಜಯ ಕುಮಾರ್ ಸಾಬು ಮಾತನಾಡಿ, ಈ ಇಳಿ ವಯಸ್ಸಿನಲ್ಲಿ ನಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಡುವ ದುಸ್ಥಿತಿ ಬಂದಿದೆ. ಕಷ್ಟಪಟ್ಟು ದುಡಿದು ಖರೀದಿಸಿದ ಆಸ್ತಿ ಮೇಲೆ ದುಷ್ಟ ಶಕ್ತಿಗಳು ಕಣ್ಣು ಹಾಕಿದ್ದು, ನಮ್ಮ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕೂಡಲೇ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.