ಸುದ್ದಿಮೂಲವಾರ್ತೆ
ಕೊಪ್ಪಳ,ಅ.01: ಹಿರಿಯ ನಾಗರಿಕರ ಜೀವನ ಸರಳ ಸುಂದರ ಮತ್ತು ಸಂತಸದಿಂದ ಕೂಡಿದ ಸಂತುಷ್ಟ ಜೀವನ ಆಗಬೇಕು ಇದಕ್ಕೆಅವರ ಆರೋಗ್ಯ ಕಾಳಜಿ ಬಹಳ ಮುಖ್ಯ . ಅದಕ್ಕೆ ಅವರಿಗಾಗಿ ಆರೋಗ್ಯ ನಿರ್ವಹಣೆ ತರಬೇತಿ ಕಾರ್ಯಕ್ರಮ ಸೋಮವಾರ ಏರ್ಪಡಿಸಲಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯ ನಾಗರಿಕರ ದಿನಾಚರಣೆ ನಿಮಿತ್ಯ ಅಕ್ಟೋಬರ್ 2 ರಂದು ಆಯೋಜಿಸಿರುವ ಕಾರ್ಯಕ್ರಮ ಸಂಸದರಾದ ಸಂಗಣ್ಣ ಕರಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಆಯುಷ್ ಅಧಿಕಾರಿಗಳು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು, ವಾರ್ತಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ‘ವೃದ್ದಾಪ್ಯದಲ್ಲಿ ಆರೋಗ್ಯ ಮಹತ್ವ’ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ರಾಜಸ್ಥಾನ ಮೌಂಟ್ ನಲ್ಲಿ ತಜ್ಞ ವೈದ್ಯರಾಗಿರುವ ಕನ್ನಡಿಗ ಡಾ. ಬಿ.ಕೆ. ಮಹೇಶ ಹೇಮಾದ್ರಿಯವರು.
ಹಿರಿಯ ನಾಗರಿಕರಿಗೆ ಊಟದ ಮಹತ್ವ, ವ್ಯಾಯಾಮದ ಮಹತ್ವ , ಶರೀರದ ಆರೋಗ್ಯ , ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅತಿ ಅವಶ್ಯಕತೆ ಬಗ್ಗೆ ಉಪನ್ಯಾಸ ನೀಡುವ ಡಾ. ಹೇಮಾದ್ರಿಯವರು ವಿಶ್ವ ಆರೋಗ್ಯ ಸಂಸ್ಥೆ ಏರ್ಪಡಿಸಿರುವ ವೃದ್ದರ ಸಮಗ್ರ ಆರೈಕೆ ಬಗ್ಗೆ ದೇಶದ್ಯಾದಂತ ಉಪನ್ಯಾಸ ನೀಡುತ್ತ ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ.
ಡಾ. ಹೇಮಾದ್ರಿಯವರು ವೃದ್ದರ ರೋಗ ಚಿಕಿತ್ಸಕರು ಹಾಗೂ ವೃದ್ದಾಪ್ಯ ಆರೋಗ್ಯದ ತಜ್ಞರು. ವೃದ್ದರ ಆರೋಗ್ಯದ ಬಗ್ಗೆ ಇವರು ವಿದೇಶದಲ್ಲಿ ವಿಷಯ ಮಂಡಿಸಿದ್ದಾರೆ. ಸಧ್ಯ ರಾಜಸ್ಥಾನದ ಮೌಂಟ್ ಅಬುನ ‘ಶಿವಮಣಿ’ ವೃದ್ದಾಶ್ರಮದಲ್ಲಿ ವೃದ್ದರೋಗ ಚಿಕಿತ್ಸಕರಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುವುದು. ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆಯುವಂತೆ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹಾಗೂ ಸ್ನೇಹ ಅಕ್ಕ ಕೋರಿದ್ದಾರೆ. ಮಾಹಿತಿಗಾಗಿ 9482610488, 8310575696 ಗೆ ಸಂಪರ್ಕಿಸಬಹುದು.