ಸುದ್ದಿಮೂಲ ವಾರ್ತೆ
ಕುಷ್ಟಗಿ, ಜು.23:ರೈತರ ಜೀವನಾಡಿಯಾಗಿರುವ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡುವುದು ಆರ್ಥಿಕ ಅಶಿಸ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಬಗ್ಗೆ ರಾಜ್ಯ ನೀರಾವರಿ ಯೋಜನೆ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತರಾದ ಗಂಗಾಧರ ಕುಷ್ಟಗಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಟ್ಣಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,16 ಬಾರಿ ಬಜೆಟ್ ಮಂಡಿಸಿರುವ ಹಣಕಾಸು ಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಆರ್ಥಿಕ ತಜ್ಞರು ಎನಿಸಿಕೊಂಡಿದ್ದಾರೆ. ಆದರೆ, ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ವೆಚ್ಚ ಮಾಡಿದರೆ ಆರ್ಥಿಕ ಅಶಿಸ್ತು ಎನ್ನುವುದಾದರೆ ಅದಕ್ಕೆ ಅವರು ಒಂದಿಷ್ಟು ವಿವರಣೆ ಕೊಡಬೇಕು ಎಂದು ಆಗ್ರಹಿಸಿದರು.
ಐದು ಗ್ಯಾರಂಟಿ ಯೋಜನೆಗಳಾದ ಸ್ತ್ರೀ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆ 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮೀ ಮನೆಯೊಡತಿಗೆ ಯೋಜನೆ 2000 ರೂಪಾಯಿ ಸೇರಿ ಇತರೆ ಗ್ಯಾರಂಟಿಗಳಿಗೆ ವೆಚ್ಚಮಾಡುವುದು ಆರ್ಥಿಕ ಅಶಿಸ್ತು ಆಗುವುದಿಲ್ಲವೇ ಎಂದು ಪ್ರಶ್ನಿಸಿರುವ ಗಂಗಾಧರ ಕುಷ್ಟಗಿ ಅವರು, ಕೃಷ್ಣಾ ಮೇಲ್ದಂಡೆಯ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಕಾಂಗ್ರೆಸ್ ನಡಿಗೆ ಕೃಷ್ಣೇ ಕಡೆಗೆ ಎಂದು ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಅವರು ನೀರಾವರಿ ಯೋಜನೆಗಳಿಗೆ ಅನುದಾನ ನೀಡದೇ ಮಾತು ತಪ್ಪಿದರು.
ಇವಾಗ ಮತ್ತೆ ಅಧಿಕಾರಕ್ಕೆ ಬಂದಿರುವ ಅವರು ಜನಪ್ರಿಯ ಯೋಜನೆಗಳಿಗೆ ಶೇ.20ರಷ್ಟು ಹಣ ಮೀಸಲಿಡುವ ಬದಲು ಶೇ.60 ರಷ್ಟು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುವ ಮೂಲಕ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ರಾಜ್ಯದಲ್ಲಿ ಕೇವಲ 50 ಲಕ್ಷ ಹೆಕ್ಟೇರ್ ನಷ್ಟು ನೀರಾವರಿಗೆ ಸರ್ಕಾರ ಒತ್ತು ನೀಡಲಿದೆ ಎಂದಿದ್ದಾರೆ. ಆದರೆ, ಕೃಷ್ಣಾ ಬಿ’ಸ್ಕೀಂನಡಿ ಬರುವ ಕೊಪ್ಪಳ ಜಿಲ್ಲಾ ಏತ ನೀರಾವರಿ ಯೋಜನೆಗೆ ಅನುದಾನ ನೀಡಿ ಪೂರ್ಣ ಗೊಳಿಸಿದರೆ ಕುಷ್ಟಗಿ, ಕೊಪ್ಪಳ, ಯಲಬುರ್ಗಾ ಹಾಗೂ ಕನಕಗಿರಿ ತಾಲೂಕಿನ ಒಣ ಬೇಸಾಯ ಪ್ರದೇಶದ ಸುಮಾರು 2 ಸಾವಿರ ಲಕ್ಷ ಹೆಕ್ಟೇರ್ ಭೂಮಿ ನೀರಾವರಿಯಾಗಲಿದೆ. ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ. ಜೊತೆಗೆ ಇಲ್ಲಿನ ರೈತರು ಆರ್ಥಿಕವಾಗಿ ಸದೃಢರಾಗಿ ಮಾರುಕಟ್ಟೆ ಮೂಲಕ ಲಕ್ಷಾಂತರ ರೂ.ಗಳನ್ನು ಸರ್ಕಾರಕ್ಕೆ ಟ್ಯಾಕ್ಸ್ ನೀಡುವ ಸಾಮರ್ಥ್ಯ ಹೊಂದುತ್ತಾರೆ. ಅಲ್ಲದೆ ರಾಜ್ಯ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದರೆ, ನೀರಾವರಿ ಯೋಜನೆಗಳಿಗೆ ವೆಚ್ಚಮಾಡುವುದು ಆರ್ಥಿಕ ಅಶಿಸ್ತು ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ದುರಾದೃಷ್ಟಕರವಾಗಿದೆ ಎಂದರು.
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಬಹುಮುಖ್ಯವಾಗಿರುವ ಕೃಷ್ಣ ಬಿ’ಸ್ಕೀಂ ಸೇರಿ ವಿವಿಧ ನೀರಾವರಿ ಯೋಜನೆಗಳ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಶ್ನಿಸಬೇಕಾದ ಧ್ವನಿಯತ್ತಬೇಕಾದ ವಿರೋಧ ಪಕ್ಷಗಳ ಶಾಸಕರು ಯಾವುದೋ ಒಂದು ಮಸೂದೆಯನ್ನು ಆಡಳಿತ ಪಕ್ಷದ ಸದಸ್ಯರು ಅಂಗಿಕಾರಗೊಳಿಸಿದ್ದಕ್ಕೆ ಎಂದು ಗಲಾಟೆ ಮಾಡಿ ಸದನ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿರುವುದು ವಿಪರ್ಯಾಸ ಎಂದ ಪತ್ರಕರ್ತ ಗಂಗಾಧರ ಕುಷ್ಟಗಿ, ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮಕರೆಗೆ ಸ್ಪಂದಿಸಿದ ಕುಷ್ಟಗಿ ಕ್ಷೇತ್ರದ ಜನತೆ, ಕೃಷ್ಣಾ ಬಿಸ್ಕೀಂ ಕೊಪ್ಪಳ ನೀರಾವರಿ ಯೋಜನೆ ಹರಿ ಬ್ರಹ್ಮ ಬಂದರೂ ಆಸಾಧ್ಯ ಎಂದು ಹೇಳಿಕೆ ನೀಡಿದ್ದ ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರರನ್ನು ಜನತೆ ಸೋಲಿಸಿದ್ದು ಹಾಗೂ ಕೊಪ್ಪಳ ನೀರಾವರಿ ಯೋಜನೆಗೆ ಸದಾ ಅಡ್ಡಿಪಡಿಸುತ್ತಾ ಬಂದಿದ್ದ ಬಸವರಾಜ ರಾಯರೆಡ್ಡಿ ಅವರು ರಾಜಕೀಯ ಗಿಮಿಕ್ ಮೂಲಕ ಗೆದ್ದಿದ್ದರೂ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಈ ಭಾಗದವರ ಸೌಭಾಗ್ಯ ಎಂದು ಹೇಳಿದರು.
ಈ ವೇಳೆ ರಂಗಭೂಮಿ ಕಲಾವಿದ ನಬಿಸಾಬ ಕುಷ್ಟಗಿ ಇದ್ದರು.