ಸುದ್ದಿಮೂಲ ವಾರ್ತೆ
ಹೊಸಕೋಟೆ, 25 : ತಾಲೂಕಿನ ಕಸಬಾ ಹೊಬಳಿಯ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನ ಶಾಸಕ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಪ್ರತ್ಯೇಕವಾಗಿ ಉದ್ಘಾಟನೆ ಮಾಡಿದರು.
ಕಟ್ಟಡ ಉದ್ಘಾಟನೆಗೆ ಗ್ರಾ.ಪಂ ಸಿಬ್ಬಂದಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂಎಲ್ಸಿ ಎಂಟಿಬಿ ನಾಗರಾಜ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಒಂದೇ ವೇದಿಕೆಯನ್ನು ಹಂಚಿಕೊಳ್ಳದ ಉಭಯತ್ರಯರು ಪ್ರತ್ಯೇಕವಾಗಿ ಆಗಮಿಸಿ ಕಟ್ಟಡವನ್ನ ಉದ್ಘಾಟನೆ ಮಾಡಿದರು. ಮೊದಲು ಶಾಸಕ ಶರತ್ ಆಗಮಿಸಿ ಟೇಪ್ ಕತ್ತರಿಸಿ ನಾಮ ಫಲಕವನ್ನು ಅನಾವರಣ ಮಾಡಿ, ವೇದಿಕೆ ಕಾರ್ಯಕ್ರಮ ಮುಗಿಸಿ ಹೊರಟರೆ, ಮಧ್ಯಾಹ್ನ ಎಂಎಲ್ಸಿ ಎಂಟಿಬಿ ನಾಗರಾಜ್ ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿ ಪ್ರತ್ಯೆಕವಾಗಿ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮ ಮಾಡಿದರು.
ಬಳಿಕ ಮಾತನಾಡಿದ ಅವರು, ಚೊಕ್ಕಹಳ್ಳಿ ಗ್ರಾಪಂ ಅಭಿವೃದ್ಧಿಯಲ್ಲಿ ಸಾಕಷ್ಟು ಮನ್ನಣೆ ಗಳಿಸಿದ್ದು, ಮತ್ತಷ್ಟು ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಶ್ರಮಿಸಬೇಕು.
ಸುಮಾರು ಒಂದು ಕೋಟಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನ ನಿರ್ಮಿಸಿ
ಸಾಕಷ್ಟು ಹೈಟೆಕ್ ಸ್ಪರ್ಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೂ ಸಹ ಮತ್ತಷ್ಟು ಹೈಟೆಕ್ ಸ್ಪರ್ಶವನ್ನು ನೀಡುವ ಕೆಲಸ ಎಲ್ಲಾ ಸದಸ್ಯರು ಮಾಡಬೇಕು. ಕಟ್ಟಡವನ್ನು ಕಟ್ಟಲು ಸರ್ಕಾರದಿಂದ 20 ಲಕ್ಷ, ನರೇಗಾದಿಂದ 30 ಲಕ್ಷ, ವರ್ಗ 1ರಲ್ಲಿ 30 ಲಕ್ಷ ಹಾಗೂ ಉಳಿದಂತೆ ದಾನಿಗಳ ನೆರವಿನಿಂದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಮಧುಶ್ರೀ ಕೆಂಪಣ್ಣ, ಉಪಾಧ್ಯಕ್ಷ ಆಂಜಿನಪ್ಪ, ಜಿ.ಪಂ ಮಾಜಿಅಧ್ಯಕ್ಷ ಕೃಷ್ಣಮೂರ್ತಿ, ಟಿಪಿಸಿಎಂಎಸ್ ಮಾಜಿ ಅಧ್ಯಕ್ಷ ಎಲ್ಎನ್ಟಿ ಮಂಜುನಾಥ್, ಇಓ ಚಂದ್ರಶೇಖರ್, ತಾಪ ಮಾಜಿ ಸದಸ್ಯ ರಾಮೇಗೌಡ, ಪಿಡಿಒ ಮಹೇಶ್, ಗ್ರಾಪಂ ಸದಸ್ಯರಾದ ತವ್ಮ್ಮಯ್ಯ, ಚಿಕ್ಕಹುಲ್ಲೂರು ಬಚ್ಚೇಗೌಡ ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು.
ಚೊಕ್ಕಹಳ್ಳಿ ಗ್ರಾಪಂ ರಚನೆಗೆ ನನ್ನ ಶ್ರಮ ಹೆಚ್ಚು
ಹೊಸಕೋಟೆ ದೊಡ್ಡಹುಲ್ಲೂರು ಗ್ರಾ.ಪಂ ವ್ಯಾಪ್ತಿಗೆ ಸೇರಿದ್ದ ಚೊಕ್ಕಹಳ್ಳಿ ಗ್ರಾಮವನ್ನು ಪ್ರತ್ಯೇಕವಾಗಿ ಗ್ರಾ.ಪಂ ಆಗಿ ಮಾಡಲು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಹಾಕಿದ ಶ್ರಮ ಹೆಚ್ಚು ಎಂದು ಎಂಎಲ್ಸಿ ಎಂಟಿಬಿ ನಾಗರಾಜ್ ತಿಳಿಸಿದರು.
ಏಳು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ದೊಡ್ಡ
ಹುಲ್ಲೂರು ಗ್ರಾಮ ಪಂಚಾಯಿತಿಗೆ ಸೇರಿದಂತಹ ಚೊಕ್ಕಹಳ್ಳಿ ಸೇರಿದಂತೆ ಏಳೆಂಟು ಗ್ರಾಮಗಳನ್ನು ಸೇರಿಸಿ ಪ್ರತ್ಯೇಕವಾಗಿ ಚೊಕ್ಕಹಳ್ಳಿ ಗ್ರಾಪಂ ರಚಿಸಿ ಕಚೇರಿಯನ್ನು ಪ್ರಾರಂಭ ಮಾಡಿದ್ದೆ. ಅದರ ಪರಿಣಾಮವಾಗಿ ದೊಡ್ಡಹುಲ್ಲೂರು ಹಾಗೂ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಗೆ ಸಾಧ್ಯವಾಯಿತು. ಎಂದರು.
ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಮಾತನಾಡಿ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಇರುವ ಕಾರಣದಿಂದಾಗಿ ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದಿದೆ.
ಗ್ರಾ.ಪಂ ಅಭಿವೃದ್ಧಿಗೆ ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು ಗ್ರಾಪಂನ ಎಲ್ಲಾ ಸದಸ್ಯರ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸಿಬ್ಬಂದಿ ವರ್ಗಗಳ ಶ್ರಮ ಹೆಚ್ಚಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಮಾಜ ಸೇವಕ ಹುಲ್ಲೂರು ಕಿರಣ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ ಸತೀಶ್,ಗ್ರಾಪಂ ಅಧ್ಯಕ್ಷೆ ಮಧುಶ್ರೀ ಕೆಂಪಣ್ಣ,ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.