ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.8: ಪಟ್ಟಣದ ಪ್ರಮುಖ ವೃತ್ತದಲ್ಲಿ ನಾಲ್ಕು ಅಂಗಡಿಗಳ ಚಾವಣಿ ಕೊರೆದು ಹಣ, ಸಾಮಾಗ್ರಿ ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನಾಲ್ಕು ಸಾಲು ಅಂಗಡಿಗಳಲ್ಲಿ ಈ ಘಟನೆ ನಡೆದಿದೆ. ಸಿದ್ರಾಮಯ್ಯ ಎಂಬುವರಿಗೆ ಸೇರಿದ ಕಬ್ಬಿಣದ ಅಂಗಡಿ, ಮಲ್ಲಿಕಾರ್ಜುನ ಕೊಳೂರು ಎಂಬುವರಿಗೆ ಸೇರಿದ ಬಿತ್ತನೆ ಬೀಜ, ಗೊಬ್ಬರದ ಅಂಗಡಿ, ಮುಸ್ತಫಾ ಅನಾಸೂರು ಎಂಬುವರಿಗೆ ಸೇರಿದ ಸ್ವೀಟ್ಸ್ ಪಾನ್ ಮಸಾಲಾ ಸ್ಟೋರ್ಸ್, ಮತ್ತೊಂದು ವೀರಭದ್ರಯ್ಯ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿಗಳ ಚಾವಣಿಯ ತಗಡುಗಳನ್ನು ಕಳ್ಳರು ಕತ್ತರಿಸಿದ್ದಾರೆ.
ಹಗ್ಗದ ಸಹಾಯದಿಂದ ಮೇಲ್ಚಾವಣಿ ಮೂಲಕ ಅಂಗಡಿಯೊಳಗಿಳಿದ ಕಳ್ಳರು, ಮುಸ್ತಫಾ ಅನಾಸೂರು ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಸುಮಾರು 30 ಸಾವಿರ ರೂ. ಮೌಲ್ಯದ ಸಿಗರೇಟ್, ಗುಟುಕಾ ಸೇರಿದಂತೆ ಇತರೆ ಪಾಕೀಟ್’ಗಳ ಹೊತ್ತೊಯ್ದಿದ್ದಾರೆ. ಗೊಬ್ಬರದ ಅಂಗಡಿಯಲ್ಲಿ ಐದಾರು ಸಾವಿರ ರೂಪಾಯಿ ಚಿಲ್ಲರೆ ಹಣ ಕದ್ದಿದ್ದಾರೆ. ಕಬ್ಬಿಣ ಅಂಗಡಿಯಲ್ಲಿ ಕಳ್ಳರ ಕೈಗೇನು ಸಿಗದಿರುವುದರಿಂದ ಹಾಗೇ ಬಿಟ್ಟಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿಯ ಮೇಲ್ಚಾವಣಿ ತಗಡು ಕತ್ತರಿಸಿದ್ದು, ಅಂಗಡಿಯೊಳಗೆ ಮೇಲ್ಭಾಗದಲ್ಲಿ ಪ್ಲೈವುಡ್ ಅಳವಡಿಸಿದ್ದರಿಂದ ಒಳನುಗ್ಗಲು ಅವಕಾಶ ಸಿಗದೇ ಹಾಗೇ ಬಿಟ್ಟಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಬಸವೇಶ್ವರ ವೃತ್ತದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ದುರಸ್ತಿಗೆ ಬಂದ ಹಿನ್ನೆಲೆಯಲ್ಲಿ ಪ್ರಯೋಜನಕ್ಕೆ ಬಾರದಂತಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಂದ ಜನ ಆತಂಕಗೊಂಡಿದ್ದಾರೆ. ಕೂಡಲೇ ಸಂಬಂಧಿಸಿದ ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಳ್ಳತನ, ಅಪಘಾತ ಹಾಗೂ ಗಲಾಟೆ ತಡೆಯಲು ಮುಖ್ಯ ರಸ್ತೆ, ವೃತ್ತಗಳಲ್ಲಿ
ಸಿಸಿ ಕ್ಯಾಮೆರಾಗಳ ದುರಸ್ತಿಗೆ ಮುಂದಾಗಬೇಕಿದೆ.