ಸುದ್ದಿಮೂಲ ವಾರ್ತೆ
ಬೆಂಗಳೂರು, ನ.13: ಕುಂದಾ ನಗರಿ ಬೆಳಗಾವಿಯ ಸುರ್ವಣಸೌಧದಲ್ಲಿ ಡಿಸೆಂಬರ್ 8 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಸಂಬಂಧ ರಾಜ್ಯಪಾಲರಿಗೆ ಅಧಿವೇಶನ ಕರೆಯುವ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಇನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ವರದಿ ಸಲ್ಲಿಸದ ಮೂರು ಸಂಪುಟ ಉಪಸಮಿತಿಗಳಿಗೆ ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಒಂದು ಸಮಿತಿಯು ಕೋವಿಡ್-19 ಸಮಯದಲ್ಲಿ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿ ಕುರಿತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಅವರ ವರದಿಗೆ ಸಂಬಂಧಿಸಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡಲು ಎರಡನೇ ಸಮಿತಿಯನ್ನು ರಚಿಸಲಾಯಿತು. ಮೂರನೇ ಸಮಿತಿಯು ಬೆಂಗಳೂರು-ಮೈಸೂರು ಮೂಲಸೌಕರ್ಯ ಅಭಿವೃದ್ಧಿ ಕಾರಿಡಾರ್ನ ಬೆಳವಣಿಗೆಗಳನ್ನು ಪರಿಶೀಲಿಸುವ ಮತ್ತು ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಪ್ರಾರಂಭಿಸುವ ಕಾರ್ಯವನ್ನು ಹೊಂದಿದೆ ಎಂದರು.
ಮೊದಲ ಮತ್ತು ಎರಡನೇ ಸಮಿತಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಿದ್ದರೆ, ಮೂರನೆಯ ಸಮಿತಿಗೆ ಗೃಹ ಸಚಿವರು ನೇತೃತ್ವ ವಹಿಸಿದ್ದಾರೆ. ವರದಿಯನ್ನು ಆದಷ್ಟು ಬೇಗ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಆದರೆ, ಸಮಯ ಮಿತಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ ಎಂದು ಸಚಿವರು ತಿಳಿಸಿದರು.
ಮೈಸೂರಿನಲ್ಲಿ ಶಾಸಕ/ಸಂಸದರ ಭವನ
ಮೈಸೂರು ನಗರದಲ್ಲಿರುವ ಸರ್ಕಾರಿ ಅತಿಥಿ ಗೃಹದ ನೌಕರರ ವಸತಿ ಗೃಹಗಳ ಆವರಣದಲ್ಲಿ ಶಾಸಕರ ಹಾಗೂ ಸಂಸದರ ಭವನವನ್ನು ಅಂದಾಜು 15 ಕೋಟಿ ರೂ.ಗಳ ಮೊತ್ತದಲ್ಲಿ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಲೋಕಸಭೆ, ರಾಜ್ಯಸಭೆ, ರಾಜ್ಯವಿಧಾನಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ಹೆಚ್ಚಿನ ಸ್ಪಷ್ಟನೆಯನ್ನು ತರುವ ಉದ್ದೇಶದಿಂದ ಕಲಂ 09ರ ಉಪ ಕಲಂ 05 ಅನ್ನು ಬದಲಾಯಿಸಲು ನಿರ್ಧರಿಸಿದೆ.
“ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) (ಕೋರ್ಟ್ ಮ್ಯಾನೇಜರ್ಗಳ ವಿಲೀನಾತಿ) (ವಿಶೇಷ) ನಿಯಮಗಳು, 2025” ಮತ್ತು ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) ಕೋರ್ಟ್ ಮ್ಯಾನೇಜರ್ಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು (ವಿಶೇಷ) ನಿಯಮಗಳು, 2025ರ ಕರಡನ್ನು ಹೊರಡಿಸಲು ಮತ್ತು ಬಾಧಿತ ವ್ಯಕ್ತಿಗಳಿಂದ ಎರಡೂ ನಿಯಮಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲು; ಹಾಗೂ ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು/ಸಲಹೆಗಳು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆಗಳು/ಸಲಹೆಗಳನ್ನು ಪರಿಗಣಿಸಿದ ನಂತರ ಯಾವುದೇ ಪ್ರಮುಖ ಮಾರ್ಪಾಡುಗಳನ್ನು ಮಾಡದಿದ್ದಲ್ಲಿ, ಸದರಿ ಕರಡು ನಿಯಮಗಳನ್ನು ಸಚಿವ ಸಂಪುಟದ ಮುಂದೆ ಮರುಸಲ್ಲಿಸದೆ ಅಂತಿಮಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ.
“ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-3, 9 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಬೀದರ್ ಜಿಲ್ಲೆಯ ಹಾಲಿ ಭಾಲ್ಕಿ ಪುರಸಭೆಯಿಂದ ನಗರಸಭೆಯನ್ನು ರಚಿಸಿ ‘ಭಾಲ್ಕಿ ನಗರಸಭೆ’ ಪ್ರದೇಶವೆಂದು ಉದ್ಘೋಷಿಸಲು; ಸಚಿವ ಸಂಪುಟ ನಿರ್ಣಯಿಸಿದೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾರಂಭಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನು ರೂ.27.92 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ನೆಲ ಮತ್ತು ಮೊದಲನೇ ಮಹಡಿಗೆ ಅವಶ್ಯವಿರುವ ಸರ್ವೀಸಸ್ ಗಳನ್ನು ರೂ.21.00 ಕೋಟಿಗಳ ಅಂದಾಜು ಮೊತ್ತದಲ್ಲಿ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದೇ ರೀತಿ ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 ಹಾಗೂ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030 ಗೆ ಅನುಮೋದನೆ ದೊರೆತಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

