ಸುದ್ದಿಮೂಲ ವಾರ್ತೆ
ಕೆಜಿಎಫ್, ಜೂ.15: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ನೀಡಿದ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಚಾಲನೆಯಿಂದ ಖಾಸಗಿ ಬಸ್ ಮಾಲಿಕರಿಗೆ, ಚಾಲಕರಿಗೆ ಹೊಡೆತ ಬಿದ್ದಿದೆ.
ಪ್ರತಿನಿತ್ಯ ಮುಳಬಾಗಲು, ವಿಕೋಟ, ಕೋಲಾರ, ಬೆಂಗಳೂರು ಕಡೆ ಹೋಗುವ ನೂರಾರು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ತುರ್ತಾಗಿ ಹೋಗಲು ಸಾಮಾನ್ಯವಾಗಿ ಖಾಸಗಿ ಬಸ್ಗಳಲ್ಲೂ ಸಹ ಓಡಾಡುತ್ತಿದ್ದರು. ಮಹಿಳೆಯರಿಗೆ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣ ಪ್ರಕಟವಾದ ದಿನದಿಂದ ಖಾಸಗಿ ಬಸ್ ಹತ್ತಲು ಮಹಿಳೆಯರು ಹಿಂದು ಮುಂದು ನೋಡುವ ವಾತಾವರಣ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಇಲ್ಲವಾದಲ್ಲಿ ಖಾಸಗಿ ಬಸ್ ನಲ್ಲಿ ಕೂತಿದ್ದ ಮಹಿಳೆಯರು ಬಸ್ ನಿಲ್ದಾಣಕ್ಕೆ ಸರ್ಕಾರಿ ಬಸ್ ಬಂದ ತಕ್ಷಣ ಸಾಲು ಸಾಲಾಗಿ ಬಸ್ನಿಂದ ಇಳಿದು ಸರ್ಕಾರಿ ಬಸ್ ಏರಲು ಮುಂದಾಗುತ್ತಾರೆ.
ಖಾಸಗಿ ಬಸ್ ನಿರ್ವಾಹಕ ಮತ್ತು ಕ್ಲೀನರ್ ಬಸ್ ನಿಲ್ದಾಣದಲ್ಲಿ ಬೆಂಗಳೂರು.. ಬೆಂಗಳೂರು.. ಕೋಲಾರ.. ಎಂದು ಕೂಗಿ ಕೂಗಿ ಪ್ರಯಾಣಿಕರನ್ನು ಬಸ್ ಹತ್ತಿಸುತ್ತಿದ್ದರು. ಸರ್ಕಾರಿ ಬಸ್ಸು ಬಂದ ತಕ್ಷಣ ಇಳಿದು ಹೋಗುವಾಗ ಈ ಸಂದರ್ಭದಲ್ಲಿ ಕಂಡಕ್ಟರ್ ಕ್ಲೀನರ್ ಮೂಖ ಪ್ರೇಕ್ಷಕನಂತೆ ನೋಡಿ ಸುಮ್ಮನೆ ಇರುವಂತಾಗಿದೆ.
ಖಾಸಗಿ ಬಸ್ ಮಾಲೀಕರು ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಬಸ್ಗಳನ್ನು ಖರೀದಿಸಿ ಓಡಿಸುತ್ತಿದ್ದಾರೆ. ಜೀವನಕ್ಕಾಗಿ ಇದನ್ನೇ ನಂಬಿಕೊಂಡಿದ್ದಾರೆ. ಸರ್ಕಾರದ ಶಕ್ತಿ ಯೋಜನೆಯಿಂದ ಪ್ರಯಾಣಿಕರು ಇಲ್ಲದೆ ಖಾಸಗಿ ಬಸ್ ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಈಗಾಗಲೇ ಸರ್ಕಾರಕ್ಕೆ ಟ್ಯಾಕ್ಸ್ ಸಹ ಕಟ್ಟುತ್ತಿದ್ದು ಬರುವ ಆದಾಯ ಟ್ಯಾಕ್ಸ್ ಹಾಗೂ ಡೀಸೆಲ್ಗೆ ಸಾಲುತ್ತಿಲ್ಲ ಎಂದು ಅಲು ತೋಡಿಕೊಳ್ಳುತ್ತಿದ್ದಾರೆ.