ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂ.1: ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಅಗತ್ಯ ರೀತಿಯ ಸಹಕಾರ ನೀಡುವುದಾಗಿ ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
2023-24ನೇ ಸಾಲಿ ಶೈಕ್ಷಣಿಕ ವರ್ಷ ಆರಂಭದ ಮೊದಲ ದಿನದಂದು ಶಾಲೆಗೆ ಮಕ್ಕಳನ್ನು ಬರಮಾಡಿಕೊಂಡು ಮಾತನಾಡಿದ ಅವರು, ಬಡ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನುಉಜ್ವಲಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತಾಲೂಕಿನಲ್ಲಿ ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಈ ಸವಲತ್ತುಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು.
ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಶಾಲಾಭಿವೃದ್ಧಿ ಸಮಿತಿಗಳು ಮತ್ತು ಶಿಕ್ಷಕರು ಸಮನ್ವಯತೆಯಿಂದ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ನೀಡಿ ಶುಭಕೋರಿದರು. ಬಿ.ಇ.ಒ ವಿವೇಕಾನಂದ, ಮಾತಂಗ ಫೌಂಡೇಷನ್ ರಾಜ್ಯ ಉಪಾಧ್ಯಕ್ಷ ಡಾ.ಎಚ್.ಎಂ. ಸುಬ್ಬರಾಜ್, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ರಾಜ್ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.