ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 9 : ಗ್ರಾಮೀಣ ಪ್ರದೇಶಗಳಲ್ಲಿರುವ ಕಲ್ಯಾಣಿ, ಕೆರೆ, ಕಾಲುವೆಗಳ ಸಂರಕ್ಷಣೆಗೆ ಮುಂದಾದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ಗ್ರಾಮಗಳು ಸುಭಿಕ್ಷವಾಗಿ ಕೃಷಿಕರು ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ತಾವರೆಕೆರೆಯಲ್ಲಿ ಗ್ರಾಮ ಪಂಚಾಯಿತಿ ಅನುದಾನದಡಿ 40 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ನೂತನ ಕಟ್ಟಡ ಹಾಗೂ ಅತ್ಯಾಕರ್ಷಕ ಕಲ್ಯಾಣಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರು ಜಲ ಸಂಗ್ರಹಣೆಗಾಗಿ ಕೆರೆ, ಕಾಲುವೆ, ಕಲ್ಯಾಣಿ, ಕುಂಟೆ, ಕಾಲುವೆ, ತೆರೆದ ಬಾವಿ ನಿರ್ಮಿಸಿ ನೀರನ್ನು ಸಂರಕ್ಷಿಸಿ ಬಳೆಸುತ್ತಿದ್ದರು. ಆಧುನಿಕತೆ ಬೆಳೆದಂತೆಲ್ಲ ಜನರು ಕೊಳವೆ ಬಾವಿಗಳತ್ತ ಆಸಕ್ತಿ ತೋರಿದ್ದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಅಂತರ್ಜಲ ಮಟ್ಟ ಕುಸಿದು ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿವಿಧ ಯೋಜನೆಗಳಡಿಯಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಸರಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಇದು ಸಾಕಾರವಾದರೆ ನಂದಗುಡಿ, ಸೂಲಿಬೆಲೆ ಭಾಗದ 29 ಕೆರೆಗಳಿಗೆ ನೀರು ಹರಿದು ಅಂತರ್ಜಲ ಮಟ್ಟ ಹೆಚ್ಚಲಿದೆ. ಎತ್ತಿನ ಹೊಳೆ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದರಿಂದ ತಾಲೂಕಿನ 46 ಕೆರೆಗಳು ಭರ್ತಿಯಾಗಲಿವೆ ಎಂದರು.
ಸರಕಾರದ ಅನುದಾನ ಹಾಗೂ ಸಾರ್ವಜನಿಕರ ತೆರಿಗೆ ಹಣವನ್ನು ಸರಿಯಾಗಿ ವಿನಿಯೋಗ ಮಾಡಿದಾಗ ಮಾತ್ರ ಗ್ರಾಮಾಭಿವೃದ್ಧಿಯಾಗಲು ಸಾಧ್ಯ. ತಾವರೆಕೆರೆ ಗ್ರಾಪಂ. ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತಾಲೂಕಿನಲ್ಲೇ ಮಾದರಿ ಗ್ರಾ.ಪಂಯಾಗಿ ರೂಪುಗೊಳ್ಳುತ್ತಿದೆ. ಆಕರ್ಷಕವಾಗಿ ಕಲ್ಯಾಣಿ ಅಭಿವೃದ್ಧಿಗೊಳಿಸಿರುವುದು ಶ್ಲಾಘನೀಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 15 ಲಕ್ಷ ರೂ. ವೆಚ್ಚದ ನೂತನ ಹೈಟೆಕ್ ಅಂಗನವಾಡಿ ಕೊಠಡಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತಾಪಂನ ಮಾಜಿ ಅಧ್ಯಕ್ಷ ಟಿ.ಎಸ್. ರಾಜಶೇಖರ್, ಉದ್ಯಮಿ ಬಿ.ವಿ. ಬೈರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜು, ಗ್ರಾ.ಪಂನ ಅಧ್ಯಕ್ಷ ಎಸ್.ಎಸ್.ಟಿ ಮಂಜುನಾಥ್, ಉಪಾಧ್ಯಕ್ಷ ಎಸ್. ಸುಧಾಕರ್, ಮಾಜಿ ಅಧ್ಯಕ್ಷರಾದ ಆರ್. ರವಿಕುಮಾರ್, ಬಸವಪ್ರಕಾಶ್, ದಯಾನಂದಬಾಬು, ಸದಸ್ಯರಾದ ಜಗದೀಶ್, ಎನ್. ರಮೇಶ್, ಭವ್ಯ ಮಂಜುನಾಥ್, ನಿತಿನ್ಕುಮಾರ್, ಮುಖಂಡರಾದ ಗುರುಬಸಪ್ಪ, ನ್ಯಾನಮೂರ್ತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.