ಸುದ್ದಿಮೂಲ ವಾರ್ತೆ
ರಾಮನಗರ,ಜೂ.19: ಯಶಸ್ಸು ಸಾಧನೆಗೆ ಗುರಿ ಇರಬೇಕು. ಗುರಿ ಸಾಧನೆಗೆ ಗುರು ಇರಬೇಕು. ಕಲೆಗಳ ವಿಚಾರದಲ್ಲೂ ಇದು ಅನ್ವಯಿಸುತ್ತದೆ. ಭಕ್ತಿ ಮತ್ತು ಶ್ರದ್ದೆ ಇದ್ದರೆ ನಮ್ಮಲ್ಲಿರುವ ಕಲೆ ಜ್ಯೋತಿಯಾಗಿ ಪ್ರಜ್ವಲಿಸುತ್ತದೆ ಎಂದು ಕಿರುತೆರೆ ಕಲಾವಿದ ಹಾಗೂ ಸುಗಮ ಸಂಗೀತ ಕಲಾವಿದ ಶಶಿಧರ್ ಕೋಟೆ ಹೇಳಿದರು.
ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಇಲ್ಲಿನ ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ, ಕರುನಾಡ ಜಾನಪದ ಕಲಾ ಮಹೋತ್ಸವ 2023 ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ರಾಮನಗರದ ಎ.ಬಿ.ಸಿ.ಡಿ ನೃತ್ಯಶಾಲೆ ಮಕ್ಕಳ ಉತ್ತಮ ಭವಿಷ್ಯಕ್ಕೆ ಪ್ರೇರಾಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಅಭಿರುಚಿಗೆ ಪೋಷಕರು ನೀರೆರೆದರೆ ಮುಂದೆ ಅವರ ಭವಿಷ್ಯ ಉಜ್ವಲಾಗಿರುತ್ತದೆ. ಕನ್ನಡ ಹೃದಯದ ಭಾಷೆಯಾಗಿ ಎಲ್ಲರಲ್ಲಿ ನನ್ನ ಭಾಷೆ ಎಂಬ ಅಭಿಮಾನ ವಿರಿಸಿ ಎಂದು ಕರೆ ನೀಡಿದರು.
ಪೊಲೀಸ್ ಸಂಚಾರ ವಿಭಾಗದ ಉಪ ಆರಕ್ಷಕ ನಿರೀಕ್ಷಕರಾದ ಸರಸ್ವತಿ ಮಾತನಾಡಿ, ನಮ್ಮ ಪೂರ್ವಿಕರು ಕಟ್ಟಿಕೊಟ್ಟ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎಬಿಸಿಡಿ ನೃತ್ಯ ಶಾಲೆಯ ರೇಣುಕಾ ಪ್ರಸಾದ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಲಾಜ್ಯೋತಿ ಟ್ರಸ್ಟ್ ನೂರಾರು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ರೇಣುಕಾಪ್ರಸಾದ್ ಮಾತನಾಡಿ, ಕಳೆದ 11 ವರ್ಷಗಳಿಂದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ದೆಹಲಿ, ದುಬೈ ಮಟ್ಟದಲ್ಲಿ ಕಾರ್ಯಕ್ರಮ ಕೊಡಲು ಸಾಧ್ಯವಾಯಿತು. ಅದರಲ್ಲೂ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಡ್ಯಾನ್ಸ್ ಕರ್ನಾಟಕದಲ್ಲಿ ಮಕ್ಕಳು ಭಾಗವಹಿಸಿರುವ ಕೀರ್ತಿಯಿದೆ. 57 ಮಕ್ಕಳು ಕಿರುತೆರೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಶ್ರೀರೇವಣಸಿದ್ದೇಶ್ವರ ಬೆಟ್ಟದ ರಾಜಶೇಖರಸ್ವಾಮೀಜಿ ಆರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಗುರ್ತಿಸಿ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಹಾಗೂ ಉಪ ಆರಕ್ಷಕ ನಿರೀಕ್ಷಕ ಸ್ಚಾಮಿ.ಕೆ, ರೈತ ನಾಯಕಿ ಅನುಸೂಯಮ್ಮ, ದೈಹಿಕ ಶಿಕ್ಷಕ ನಾರಾಯಣ್ ಅವರುಗಳಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಎಬಿಸಿಡಿ ನೃತ್ಯ ಶಾಲಾ ಮಕ್ಕಳಿಂದ ನಡೆದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಸಿ.ರಾಜು, ಡ್ಯಾನ್ಸ್ ಕರ್ನಾಟಕದ ಮಾಸ್ಟರ್ ದೀಕ್ಷಿತ್, ಪ್ರಣಮ್ಯ, ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘದ ಸಂಸ್ಥಾಪಕ ಡಾ.ದಿನಕರ್, ಸಮಾಜ ಸೇವಕರಾದ ಸೂರಿಮಿರಾಡೆ, ನಗರಸಭೆ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಪಟೇಲ್ ಶಾಲೆಯ ಸಂಸ್ಥಾಪಕರಾದ ಪಟೇಲ್ ಸಿ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ಡಾ.ಭಾಸ್ಕರ್ ರಾಜು, ಸಮಾಜ ಸೇವಕ ಕೃಷ್ಣಮೂರ್ತಿ, ಕಲಾವಿದರಾದ ಸುದರ್ಶನ್, ಡಾ.ನಮನಚಂದ್ರು, ಗಾಯಕ ಶಿವಕುಮಾರ್ ಬ್ಯಾಡ್ರಳ್ಳಿ , ಪ್ರೇಮ್, ಟ್ರಸ್ಟ್ ಪದಾಧಿಕಾರಿ ಶಶಿಕಲಾ, ನಂದಗೋಕುಲ ಸಂಸ್ಥಾಪಕ ಡಾ.ಎನ್.ವಿ.ಲೋಕೇಶ್ ಮತ್ತಿತರರು ಇದ್ದರು.