ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.5: ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತಗಳು ವಿಧವಿಧವಾದ ಪ್ರಯತ್ನ ನಡೆಸುತ್ತಿವೆ. ತಾಲ್ಲೂಕಿನ ಸರಕಾರಿ ಹಾಗೂ ಅನುದಾನಿತ ಶಾಲಾ ಅಧಿಕಾರಿಗಳು ಬೈಕ್ ರ್ಯಾಲಿ ನಡೆಸುವ ಮೂಲಕ ಜನರ ಗಮನ ಸೆಳೆದರು.
ಈ ಅಭಿಯಾನಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮುನಿರಾಜ ಚಾಲನೆ ನೀಡಿದರು. ಚುನಾವಣೆ ಸುಗಮವಾಗಿ ನಡೆಸಲು ಹಾಗೂ ಜನರಲ್ಲಿ ಮತದಾನದ ಅರಿವು ಮೂಡಿಸಲು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಮತದಾನ ಮಾಡಬೇಕೆಂಬ ಕಾರಣಕ್ಕಾಗಿ ಚುನಾವಣಾ ಆಯೋಗ ವಿಧವಿಧವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಸರ್ಕಾರಿ ಹಾಗೂ ಅನುದಾನಿತ ರಹಿತ ಮತ್ತು ಅನುದಾನ ರಹಿತ ಶಾಲಾ ಅಧಿಕಾರಿರವರು ಬೈಕ್ ರ್ಯಾಲಿ ನಡೆಸಿದರು.
ತಾಲ್ಲೂಕು ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಈ ಬೈಕ್ ರ್ಯಾಲಿಯು ತಾಲ್ಲೂಕು ಆಡಳಿತ ಕಚೇರಿಯಿಂದ ಉಲ್ಲೂರು ಪೇಟೆ, ಸಂತೆ ಬೀದಿ, ಕೋಟೆ ಸರ್ಕಲ್, ಬಸ್ ನಿಲ್ದಾಣ ಮುಖಾಂತರ ಅಶೋಕ ಸರ್ಕಲ್ ನಿಂದ ನಗರದ ಪ್ರಮುಖ ರಸ್ತೆಯ ಮುಖಾಂತರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಹತ್ತಿರ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಶ್ರೀನಾಥ್, ಬಿಇಓ, ಅನುದಾನ ರಹಿತ ಹಾಗೂ ಅನುದಾನಿತ ಸಹಿತ ಶಾಲೆಯ ಪದಾಧಿಕಾರಿಗಳು, ಎಲ್ಲಾ ಶಿಕ್ಷಣ ಇಲಾಖೆ ಸಿಬ್ಬಂದಿ, ದೈಹಿಕ ಶಿಕ್ಷಕರು, ಪೋಲಿಸ್ ಇಲಾಖೆಯವರು ಸೇರಿದಂತೆ ಹಲವರು ಭಾರಿಯಾಗಿದ್ದರು.