ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.14:ದೇವನಹಳ್ಳಿ ತಹಶೀಲ್ದಾರ್ ಆಗಿದ್ದ ಶಿವರಾಜ್ ರವರ ಮೇಲೆ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಲೋಕಾಯುಕ್ತ ಪೊಲೀಸರು ಆ. 30ರಂದು ದಾಖಲು ಮಾಡಿದ್ದ ಎಫ್ಐಆರ್ಗೆ ಹೈಕೋರ್ಟ್ನ ನ್ಯಾ.ಹೇಮಂತ್ ಚಂದನ್ಗೌಡರ್ರವರ ಏಕ ಸದಸ್ಯ ಪೀಠವೂ ಸೆ.7ರಂದು ತಡೆ ನೀಡಿದ್ದರೂ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸೆ.11ರಂದು ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದು ತಿಳಿದು ಬಂದಿದೆ.
ಹೈಕೋರ್ಟ್ ಆದೇಶದಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಸದಂತೆ ಸೂಚನೆ ನೀಡಿರುವ ನ್ಯಾಯಪೀಠವೂ, ಸರ್ಕಾರಿ ಅಧಿಕಾರಿ ವಿರುದ್ಧ ದೂರು ದಾಖಲು ಮಾಡುವ ಮೊದಲು 2021ರ ಸುಪ್ರೀಂ ಕೋರ್ಟ್ ಆದೇಶದಂತೆ ಸೂಕ್ತವಾಗಿ ಪ್ರಾಥಮಿಕ ತನಿಖೆ ನಡೆಸುವುದು ಅತ್ಯಗತ್ಯ ಎಂದು ತಿಳಿಸಿದೆ.
ತಹಶೀಲ್ಧಾರ್ ಶಿವರಾಜ್ರನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸೋಮವಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿರುವ ತಹಶೀಲ್ದಾರ್ ಶಿವರಾಜ್ರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಪೀಠವೂ ಅವರ ಅಮಾನತು ಆದೇಶಕ್ಕೂ ತಡೆ ನೀಡಿದೆ.
ಕಳೆದ ಫೆ.7, 2022 ರಿಂದ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡಿರುತ್ತಾರೆ. ಹೆಚ್ಚುವರಿ ಆಸ್ತಿ ಪತ್ತೆ ಎಂದು ಅಮಾನತ್ತುಗೊಳಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದು, ಸರಕಾರ ಸೆ.11, 2023 ರಂದು ಅಮಾನತ್ತುಗೊಳಿಸಿದೆ. ಆದರೆ, ನ್ಯಾಯಾಲಯದಲ್ಲಿ 13 ರಂದು ತಡೆಯಾಜ್ಞೆ ಬಂದಿದ್ದು, ತಹಶೀಲ್ದಾರ್ ಆಗಿ ಕರ್ತವ್ಯವನ್ನು ಮುಂದುವರೆಸುವಂತೆ ಕೆ.ಎ.ಟಿ. ನ್ಯಾಯಾಲಯ ಆದೇಶ ಮಾಡಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಹಶಿಲ್ದಾರ್ ಶಿವರಾಜ್ ತಿಳಿಸಿದರು.