ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 11 : ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಹೆಚ್ಚಾಗಿದ್ದು, ಜನರು ಪುಸ್ತಕಗಳನ್ನು ಓದುವುದು ಕಡಿಮೆಯಾಗುತ್ತಾ ಬಂದಿದೆ. ಹೀಗಾಗಿ, ಪುಸ್ತಕಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳುವುದು ಒಳಿತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದರು.
ನಯನ ಸಭಾಂಗಣದಲ್ಲಿ ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಪುಸ್ತಕವನ್ನು ಓದಿದರೆ ತೃಪ್ತಿಯ ಭಾವವಿರುತ್ತದೆ. ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸವುದರ ಜೊತೆಗೆ ಪೂರಕ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದರು.
ಇಂದಿನ ದಿನಗಳಲ್ಲಿ ಸಾಹಿತ್ಯಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಸಾಹಿತ್ಯವನ್ನು ಓದುವ ಹವ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಸಾಹಿತ್ಯ, ಕಲಾವಿದರು, ಕನ್ನಡ ಸಂಸ್ಕಂತಿ ನೋಡಿದಂತೆಲ್ಲ ಅದರ ರುಚಿ ಹೆಚ್ಚಾಗುತ್ತದೆ. ಅದರ ರುಚಿಯನ್ನು ಅನುಭವಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಸಾಹಿತ್ಯವನ್ನು ಎಲ್ಲರಿಗೂ ಮುಟ್ಟಿಸುವ ಪ್ರಯತ್ನವನ್ನು ಇಲಾಖೆಯು ಮಾಡುತ್ತದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕಗಳ ವಿತರಣೆಯ ಮೂಲಕ ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಇದರ ವ್ಯಾಪ್ತಿಯು ಹಳ್ಳಿ ಹಳ್ಳಿಗೂ ತಲುಪುವಂತಾಗಬೇಕು. ಈ ನಿಟ್ಟಿನಿಲ್ಲಿ ಪ್ರಾಧಿಕಾರವು ಮಾಡುತ್ತಿದೆ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಹೆಚ್. ಎಲ್ ಪುಪ್ಪ ಮಾತನಾಡಿ, ಖಾಸಗಿ ಸ್ವಾಮ್ಯದಲ್ಲಿ ಪ್ರಕಟವಾಗುವ ಪುಸ್ತಕಗಳು ಅತ್ಯಾಧುನಿಕ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡರೆ ಅತ್ಯಂತ ಆಕರ್ಷಕವಾಗಿರುತ್ತದೆ. ಸರ್ಕಾರಿ ಸ್ವಾಮ್ಯದಲ್ಲಿ ಪ್ರಕಟವಾಗುವ ಪುಸ್ತಕಗಳು ಸ್ಫರ್ಧೆಯನ್ನು ಎದುರಿಸುತ್ತಿದೆ. ಪ್ರಕಟವಾಗುವ ಪುಸ್ತಕಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚಿಂತನೆ ನಾವು ಮಾಡಬೇಕಾಗಿದೆ ಎಂದರು.
ಕನ್ನಡ ಸಂಸ್ಕಂತಿ ಇಲಾಖೆಯ ನಿರ್ದೇಶಕರಾದ ಡಾ. ಕೆ. ಧರಣಿದೇವಿ ಮಾಲಗತ್ತಿ, ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ಉಪಸ್ಥಿತರಿದ್ದರು.