ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.2: ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಂಚಾಲಕಿ ಮತ್ತು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಟೀಕಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ವಿನಾಶಕಾಲ ಬಂದಿದೆ. ಇಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಬಜರಂಗದಳ ನಿಷೇಧಿಸುವುದಾಗಿ ಹೇಳಲಾಗಿದೆ. ಆದರೆ, ಈಗಾಗಲೇ ಭಯೋತ್ಪಾದಕ ಮತ್ತು ದೇಶವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಅನ್ನು ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ತಿಳಿಸಿದರು.
ಇದೇ ಪಿಎಫ್ಐ ಮೇಲಿನ ಪ್ರಕರಣಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡು ಆ ಸಂಘಟನೆಯ ನೂರಾರು ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಕಾಂಗ್ರೆಸ್, ಬಜರಂಗದಳವನ್ನು ಗುರಿಯಾಗಿಸಿಕೊಂಡಿದೆ. ಪಿಎಫ್ಐ ಸಖ್ಯವನ್ನು ಹೊಂದಿದೆ. ಬಜರಂಗದಳ, ಆರೆಸ್ಸೆಸ್ನ ಭಾಗವಾಗಿದ್ದು, ಯುವಕರ ಮಧ್ಯೆ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಅದುÀ ಯಾವತ್ತೂ ದೇಶವಿರೋಧಿ ಕೆಲಸ ಮಾಡಿಲ್ಲ. ಇಂತಹ ಸಂಘಟನೆಯನ್ನು ಬಾಂಬ್ ಸ್ಫೋಟಿಸುವ, ಮತೀಯ ಗಲಭೆಗಳನ್ನು ನಡೆಸುವ, ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ಪಿಎಫ್ಐ ನೊಂದಿಗೆ ಕಾಂಗ್ರೆಸ್ ಹೋಲಿಕೆ ಮಾಡಿದೆ ಎಂದು ಆಕ್ಷೇಪಿಸಿದರು.
ಬಜರಂಗದಳವನ್ನು ನಿಷೇಧಿಸುವ ಶಕ್ತಿಯನ್ನು ಕಾಂಗ್ರೆಸ್ ತೋರಿಸಲಿ. ಇದಕ್ಕೆ ಬಿಜೆಪಿ ತಕ್ಕ ಉತ್ತರ ನೀಡುತ್ತದೆ. ಕಾಂಗ್ರೆಸ್ ಈ ಹಿಂದೆ ಆರೆಸ್ಸೆಸ್ ನಿಷೇಧಿಸಿತ್ತು. ಆದರೆ, ಸುಪ್ರೀಂಕೋರ್ಟ್ ಈ ನಿಷೇಧ ಕ್ರಮವನ್ನು ತಿರಸ್ಕರಿಸಿತ್ತು. ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ. ಬಿಜೆಪಿ, ಬಜರಂಗದಳದೊಂದಿಗೆ ಇದೆ. ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಇದೆ ಎಂದು ಹೇಳಿದರು.
ಮುಸ್ಲಿಮರಿಗೆ 10,000 ಕೋಟಿ ರೂ. ನೀಡುವುದಾಗಿ, ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ, ಟಿಪ್ಪು ಜಯಂತಿ ಮತ್ತೆ ಆಚರಣೆ, ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವುದಾಗಿ ಕಾಂಗ್ರೆಸ್ ಹೇಳಿದೆ. ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜನವಿರೋಧಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮಸ್ಲಿಮರ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಪಿಎಫ್ಐ ಒತ್ತಡದಿಂದ ಬಜರಂಗದಳ ನಿಷೇಧಿಸುವ ಭರವಸೆ ನೀಡಿದ್ದಾರೆ. ಕೇರಳದ ಮಲಪ್ಪುರಂನಂತೆ ಕರ್ನಾಟಕವನ್ನು ದೇಶವಿರೋಧಿ ಚಟುವಟಿಕೆಗಳು ನಡೆಯಲು ಬಿಜೆಪಿ ಬಿಡುವುದಿಲ್ಲ. ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್, ಒಂದಂಕಿಗೆ ಇಳಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಗುಜರಾತ್ ಬಿಜೆಪಿ ಮಾಧ್ಯಮ ಸಂಚಾಲಕ ಯಜ್ಞೇಶ್ ಧವೆ ಉಪಸ್ಥಿತರಿದ್ದರು.