ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.24: ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಕೊನೆಗೂ ಮನಸ್ಸು ಮಾಡಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಅವಧಿ ಮುಗಿದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ವರಿಷ್ಠರು ಯಾರನ್ನೂ ನೇಮಕ ಮಾಡಿಲ್ಲ. ಇದು ರಾಜ್ಯ ಬಿಜೆಪಿ ನಾಯಕರಿಗೆ ಮುಜುಗರ ತರಿಸಿತ್ತು. ಜತೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿಯ ನಡೆ ಕಾಂಗ್ರೆಸ್ ಟೀಕೆಗೆ ಗುರಿಯಾಗಿತ್ತು.
ನಾಲ್ಕು ತಿಂಗಳಿನಿಂದ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡದೆ ರಾಜ್ಯ ನಾಯಕರನ್ನು ಒಂದು ರೀತಿಯಲ್ಲಿ ಕಾಡಿದ್ದ ಬಿಜೆಪಿ ವರಿಷ್ಠರು ಕೊನೆಗೂ ಈ ಎರಡು ಸ್ಥಾನಗಳಿಗೆ ನೇಮಕ ಮಾಡುವ ತೀರ್ಮಾನ ಮಾಡಿದ್ದು, ಅದರಂತೆ ಬಿಜೆಪಿಯ ನೂತನ ಅಧ್ಯಕ್ಷರನ್ನಾಗಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಬೊಮ್ಮಾಯಿ ಅಥವಾ ಯತ್ನಾಳ್?
ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲವೇ ಬಸವನಗೌಡ ಪಾಟೀಲ್ ಯತ್ನಾಳ್ ಇವರಲ್ಲಿ ಒಬ್ಬರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಎಲ್ಲವೂ ನಿಗದಿಯಂತಾದರೆ ಇನ್ನು ಎರಡು-ಮೂರು ದಿನಗಳಲ್ಲಿ ಬಿಜೆಪಿ ವರಿಷ್ಠರು ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಪ್ರಕಟಿಸುವರು ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.
ರಾಜ್ಯ ರಾಜಕಾರಣಕ್ಕೆ ಬರಲ್ಲ: ಶೋಭಾ
ಈ ಮಧ್ಯೆ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ತಮ್ಮನ್ನು ನೇಮಕ ಮಾಡುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿ ಸಂತೋಷವಾಗಿದ್ದೇನೆ. ಅಲ್ಲಿಯೇ ಇರುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಇಲ್ಲ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರುವ ಇಚ್ಛೆಯಿಲ್ಲ. ಕೇಂದ್ರದಲ್ಲಿ ಒಳ್ಳೆಯ ಸಚಿವ ಸ್ಥಾನ ಕೊಟ್ಟಿದ್ದಾರೆ. ಕೇಂದ್ರ ಸಚಿವೆಯಾಗಿಯೇ ಮುಂದುವರೆಯುತ್ತೇನೆ ಎಂದು ಹೇಳಿರುವುದು ಅವರು ರಾಜ್ಯ ಬಿಜೆಪಿ ಅಧ್ಯಕ್ಷಗಿರಿಯನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂಬ ಚರ್ಚೆಗೂ ಕಾರಣವಾಗಿದೆ.
ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ತಮ್ಮನ್ನು ನೇಮಕ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ರೀತಿಯ ಸುದ್ದಿಗಳು ಹೇಗೆ ಬರುತ್ತವೆಯೋ ನನಗೆ ಗೊತ್ತಿಲ್ಲ ಎಂದು ಶೋಭ ಕರಂದ್ಲಾಜೆ ಹೇಳಿ, ಮುಂದಿನ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.