ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಕರಾವಳಿ ಭಾಗದಲ್ಲಿ ಗಲಾಟೆ, ಕೊಲೆಗಳು ಆಗಬೇಕಾದರೆ ಶೂದ್ರರ ಹುಡುಗರನ್ನು ಕರೆದುಕೊಂಡು ಬಂದು ಮುಂದೆ ಬಿಡುತ್ತಾರೆ. ಆರ್ಎಸ್ಎಸ್ನ ಒಬ್ಬನಾದ್ರೂ ಜೈಲಿಗೆ ಹೋಗಿದ್ದರೆ, ಕೊಲೆ ಆಗಿದ್ದರೆ ತೋರಿಸಿ ನೋಡೋಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಮಯ್ಯ ಸವಾಲು ಹಾಕಿದರು.
ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನದಲ್ಲಿ ಅವರು ಮಾತನಾಡಿದರು.
ಹಿಂದುಳಿದ ಜಾತಿಯವರು ಅಥವಾ ದಲಿತರು ಬಿಜೆಪಿಯಿಂದ ಗೆದ್ದರೆ ಅವರು ಹೇಳಿದಂತೆ ಮಾಡಬೇಕಲ್ವಾ? ಅವರು ಗರ್ಭಗುಡಿಯಲ್ಲಿ ನಿಂತು ತೀರ್ಮಾನ ಮಾಡಿ ಬಂದು ಹೇಳುತ್ತಾರೆ, ಅದನ್ನು ಇವರು ಜಾರಿ ಮಾಡಬೇಕು. ಜೈಲಿನಿಂದ ಬಂದವರಿಗೆ ಹೂವಿನ ಹಾರ ಹಾಕುವವರು ಇವರು. ಅವರನ್ನು ಜೈಲಿಗೆ ಕಳಿಸಿದ್ದು ಕೂಡ ಇವರೇ. ಈ ರೀತಿ ಜನರ ದಾರಿ ತಪ್ಪಿಸಿ ಗೊಂದಲ ನಿರ್ಮಾಣ ಮಾಡಿಸುತ್ತಾರೆ. ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಹೋದರೆ ಅಂಬೇಡ್ಕರ್ ಅವರು ನೀಡಿದ್ದ ಎಚ್ಚರಿಕೆಯ ಮಾತು ಸತ್ಯವಾಗುತ್ತದೆ ಎಂದು ಹೇಳಿದರು.
ಈ ಬಿಜೆಪಿ ಆರ್ಎಸ್ಎಸ್ ರಾಜಕೀಯ ಅಂಗ. ಇದನ್ನು ನಿಯಂತ್ರಿಸುವುದು ಆರ್ಎಸ್ಎಸ್ ಮತ್ತು ಹಿಂದೂ ಮಹಾಸಭಾ. ಗೋಲ್ವಾಲ್ಕರ್ ಅವರ ಚಿಂತನ ಗಂಗಾ ಪುಸ್ತಕದಲ್ಲಿ, ಆರ್,ಎಸ್,ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಅವರು ಸಂವಿಧಾನ ಹೇಳುವ ಸಮಾನತೆಗೆ ವಿರುದ್ಧವಾದವರು. ಸಮಾಸಮಾಜ ಸ್ಥಾಪನೆ, ಎಲ್ಲರಿಗೂ ಶಿಕ್ಷಣ ನೀಡುವುದು, ಸಂಪತ್ತಿನಲ್ಲಿ ಪಾಲುದಾರರನ್ನಾಗಿ ಮಾಡುವುದು ಅವರಿಗೆ ಇಷ್ಟವಿಲ್ಲ. ಕಾರಣ ಸಮಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ. ಸಮಾಜದಲ್ಲಿ ಮೇಲು ಕೀಳು ಎಂಬ ತಾರತಮ್ಯ ಇದ್ದಾಗ ಮಾತ್ರ ಶೋಷಣೆಗೆ ಅವಕಾಶ ಇರುತ್ತದೆ. ಅವರಿಗೆ ತಾವು ಮೇಲ್ವರ್ಗದ ಜನ ಎಂಬ ಅಭಿಪ್ರಾಯ ಸಮಾಜದಲ್ಲಿ ಯಾವಾಗಲು ಇರಬೇಕು ಎಂದು ಬಯಸುವವರು ಎಂದು ಹೇಳಿದರು.
ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ಭಾವಿಸಿಕೊಂಡು ಕೆಲವು ಜನ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಸನ್ಮಾನ ಮಾಡಿ ಹೊಗಳಿದ್ದಾರೆ. ಎಲ್ಲರಿಗೂ ತಾನು ಶಾಸಕನಾಗಬೇಕು, ಪಾಲಿಕೆ ಸದಸ್ಯನಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಇಂದಿನ ನಿರ್ಣಯಗಳ ಜಾರಿಗೆ ಹೋರಾಟ ಮಾಡಿ. ಹಿಂದುಳಿದ ಜಾತಿಯವರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ಇರಬೇಕು ಎಂದು ಹೋರಾಟ ಮಾಡಿ. ರಾಜ್ಯಸಭೆಯಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡಿ. ಇದನ್ನು ಮಾಡುವುದಿಲ್ಲ. ಅವರಿಗೊಂದಷ್ಟು ಜನ ಸಿಗುತ್ತಾರೆ, ಅವರ ಮೂಲಕ ತುತ್ತೂರಿ ಊದಿಸುತ್ತಾರೆ ಎಂದು ಹೇಳಿದರು.
1931ರ ನಂತರ ಜಾತಿ ಗಣತಿ ನಡೆದಿಲ್ಲ, ಇದನ್ನು ನಾವು ಮಾಡಿದ್ದೆವು. ಸ್ವಾತಂತ್ರ್ಯ ನಂತರ
ಲಂಬಾಣಿ ಜನ, ಕುರುಬರು, ಕುಂಬಾರರು, ಮಡಿವಾಳರು, ಅಲ್ಪಸಂಖ್ಯಾತರು, ಕ್ಷೌರಿಕರು, ದಲಿತರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಾಗಬೇಕಲ್ವಾ? ಈ ಪರಿಸ್ಥಿತಿ ಗೊತ್ತಾಗದೆ ಹೋದರೆ ಅವರನ್ನು ಮುನ್ನೆಲೆಗೆ ತರಲು ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ? 1931ರ ನಂತರ ಜಾತಿ ಗಣತಿ ಮಾಡಿಲ್ಲ, ಮೀಸಲಾತಿ ವಿಚಾರ ಬಂದಾಗಲೆಲ್ಲಾ ನ್ಯಾಯಾಲಯಗಳು ನಿಮ್ಮ ಬಳಿ ಜಾತಿಗಳ ಜನಸಂಖ್ಯೆಗೆ, ಅವರ ಸ್ಥಿತಿಗತಿಗಳಿಗೆ ಸಂಬಂಧಿಸಿದ ನಂಬಿಕಾರ್ಹ ಮಾಹಿತಿ ಯಾವುದಿದೆ ಎಂದು ಹಲವು ಬಾರಿ ಪ್ರಶ್ನಿಸಿವೆ. ಜನ ತಮ್ಮ ಸಮುದಾಯದ ಜನಸಂಖ್ಯೆಗಿಂತ ಎರಡು ಮೂರು ಪಟ್ಟು ಜಾಸ್ತಿ ಜನಸಂಖ್ಯೆ ಹೇಳುತ್ತಾರೆ. ಹೀಗಾದರೆ ಆರೂವರೆ ಕೋಟಿ ಇರುವ ಕನ್ನಡಿಗರು ಹದಿನಾರುವರೆ ಕೋಟಿ ಆಗಿಬಿಡುತ್ತಾರೆ. ನಾವು ಮನೆ ಮನೆಗೆ ತೆರಳಿ ಮೂರು ವರ್ಷಗಳ ಕಾಲ ಮಾಹಿತಿ ಸಂಗ್ರಹಿಸಿ ಜಾತಿ ಗಣತಿ ಮಾಡಿದ್ದೆವು, ಇಷ್ಟೆಲ್ಲ ಮಾಡಿದ ಮೇಲೆ ಆ ವರದಿಯನ್ನು ತೆಗೆದುಕೊಳ್ಳಬೇಕಾ ಬೇಡ್ವಾ? ಸದಾಶಿವ ಆಯೋಗದ ವರದಿ ಇನ್ನು ಸದನದ ಮುಂದೆ ಬಂದೇ ಇಲ್ಲ, ಬಹಳಷ್ಟು ಜನ ಇದನ್ನು ಓದಿಕೊಂಡಿಲ್ಲ ಎಂದರು.
ಪರಿಶಿಷ್ಟ ಜಾತಿಯವರ ಮೀಸಲಾತಿ ಪ್ರಮಾಣವನ್ನು 15 ರಿಂದ 17% ಗೆ ಏರಿಕೆ ಮಾಡಿ, ಈ 17% ಅನ್ನು ಆಧಾರವಾಗಿಟ್ಟುಕೊಂಡು ವಿವಿಧ ಜಾತಿಗಳಿಗೆ 6%, 4.5%, 1% ಹೀಗೆ ಲೆಕ್ಕಹಾಕಿದ್ದಾರೆ. ಆದರೆ ಈ ಮೀಸಲಾತಿ ಹೆಚ್ಚಳ ಇನ್ನು ಊರ್ಜಿತವೇ ಆಗಿಲ್ಲ. ಲಂಬಾಣಿಗಳಿಗೆ, ಬೋವಿಗಳಿಗೆ 4.5% ಮೀಸಲಾತಿ ಲೆಕ್ಕ ಹಾಕಿದ್ದಾರೆ ಇದಕ್ಕೂ ಮೊದಲು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕು. ಈ ಬಿಜೆಪಿಯವರು ಜನರ ಹಣೆಗೆ ತುಪ್ಪ ಹಚ್ಚಿದ್ದಾರೆ, ಮೂಗಿಗೆ ಹಚ್ಚಿದ್ದರೆ ವಾಸನೆಯಾದರೂ ಬರುತ್ತಿತ್ತು, ಈಗ ವಾಸನೆಯೂ ಬರುತ್ತಿಲ್ಲ.
ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದರೆ ಬಿಜೆಪಿಯವರು ಇದನ್ನು ನಂಬಬೇಡಿ, ಅವರಿಂದ 10 ಕೆ.ಜಿ ಕೊಡೋಕಾಗಲ್ಲ ಎನ್ನುತ್ತಾರೆ. ಹಿಂದೆ 7 ಕೆ.ಜಿ ಅಕ್ಕಿ ಕೊಟ್ಟವರಿಗೆ ಈಗ 10 ಕೆ.ಜಿ ಅಕ್ಕಿ ಕೋಡೋಕಾಗಲ್ವಾ? ಇದಕ್ಕೆ ಎರಡು ಮೂರು ಸಾವಿರ ಕೋಟಿ ಹಣ ಹೆಚ್ಚು ಖರ್ಚಾಗಬಹುದು ಅಷ್ಟೆ. ಅಪಪ್ರಚಾರ ಮಾಡುವವರ ಮಾತಿಗೆ ಬೆಲೆ ಕೊಡದೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.