ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.27: ಶ್ರೀ ಮಹರ್ಷಿ ವಾಲ್ಮೀಕಿಯವರ 2023 ನೇ ಸಾಲಿನ ಜಯಂತ್ಯುತ್ಸವವನ್ನು ಸೀಗೆ ಹುಣ್ಣಿಮೆ ದಿನವಾದ ಅ.28ರಂದು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವಬಿ. ನಾಗೇಂದ್ರ ಹೇಳಿದರು.
ರಾಜ್ಯಮಟ್ಟದ ಶ್ರೀ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ರಾಜನಹಳ್ಳಿಯ ಶ್ರೀ ಮಹರ್ಷಿ ಗುರುಪೀಠದ ಜಗದ್ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿ ಅವರು ದಿವ್ಯ ಸಾನಿಧ್ಯದೊಂದಿಗೆ ಶಾಸಕರಾದ ರಿಜ್ವಾನ್ ಹರ್ಷದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಬಸವಗುಡಿಯಿಂದ ವಾಲ್ಮೀಕಿ ಜ್ಯೋತಿಯೊಂದಿಗೆ ಸಮುದಾಯದ ಮಹನೀಯರ ಕುರಿತ ಸ್ತಬ್ಧ ಚಿತ್ರಗಳ ಮೆರವಣಿಗೆ ಬೈಕ್ ರ್ಯಾಲಿ ನಡೆಯಲಿವೆ. ಶ್ರೀ ಬಸವೇಶ್ವರ ವೃತ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಸಾರೋಟ್ದೊಂದಿಗೆ ವಿವಿಧ ಬುಡಕಟ್ಟು ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ವಾಲ್ಮೀಕಿ ಪ್ರಶಸ್ತಿ ಪ್ರದಾನ:
ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಂತಹ 8 ಮಂದಿಯನ್ನು ಆಯ್ಕೆ ಮಾಡಿ ವಾಲ್ಮೀಕಿ ಮಹರ್ಷಿ ವಾಲ್ಮೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ಸಾಧಕರಿಗೆ 5 ಲಕ್ಷ ರೂಪಾಯಿ ನಗದು ಮತ್ತು 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಸಚಿವ ಬಿ. ನಾಗೇಂದ್ರ ಘೋಷಿಸಿದರು.
ಹೈಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎನ್.ವೈ, ಹನುಮಂತಪ್ಪ, ರಾಜನಹಳ್ಳಿ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಶ್ರೀ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮಿಜಿಯವರ ಮಾತೃಶ್ರೀ ಮಹಾದೇವಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯ ರಾಮಣ್ಣ ಮಹಾದೇವ ಗಸ್ತಿ, ಸಂಘ ಸಂಸ್ಥೆಗಳ ವಿಭಾಗದಲ್ಲಿ ಹಾಸನ ಜಿಲ್ಲೆಯ ಜಿ.ಓ. ಮಹಾಂತಪ್ಪ, ಸಂಘಟನೆಗಾಗ ಶ್ರಮಿಸಿದ ಮೈಸೂರು ಜಿಲ್ಲೆಯ ಜೇನು ಕುರುಬ ಸಮುದಾಯಕ್ಕೆ ಸೇರಿದ ಸೋಮಣ್ಣ, ರಾಯಚೂರು ಜಿಲ್ಲೆಯ ಸ್ತ್ರೀರೋಗ ವೈದ್ಯೆ ಡಾ.ಶಾರದ ಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರದಿಂದ ವಿಜಯನಗರ ಜಿಲ್ಲೆಯ ಕವಯತ್ರಿ ಸುಕನ್ಯಾ ಮಾರುತಿ ಮತ್ತು ಕಲಾ ಕ್ಷೇತ್ರದಿಂದ ಬಯಲಾಟ ಪ್ರದರ್ಶನಗಳನ್ನು ನೀಡುತ್ತಿರುವ ಬಳ್ಳಾರಿ ಜಿಲ್ಲೆಯ ಸುಜಾತಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವರುವಿವರಿಸಿದರು.