ಬೆಂಗಳೂರು, ಜು 2: ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ ಎಂದರು.
ಚಾಚುತಪ್ಪದೆ ಜಾರಿ
ನಾವು ಚುನಾವಣೆ ವೇಳೆ ನೀಡಿರುವ ಐದೂ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್ ನಲ್ಲೇ ಐದೂ ಘೋಷಣೆಗಳಿಗೂ ಹಣ ಕೊಡುತ್ತೇವೆ. ನಮ್ಮ ಐದೂ ಘೋಷಣೆಗಳು ಜಾತಿ-ಧರ್ಮ ಮೀರಿದವುಗಳು. ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗೆ ಈ ಐದು ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ ಎಂದರು.
ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪ ಸಂಖ್ಯಾತ ಸಮುದಾಯಗಳ, ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಕೊನೆಯವರೆಗೂ ರಾಜಕಾರಣದಲ್ಲಿ ಕ್ರಿಯಾಶೀಲವಾಗಿರುತ್ತೇನೆ. ಬಡವರ ಪರ ರಾಜಕಾರಣ, ಹೋರಾಟ ಮುಂದುವರೆಸುತ್ತೇನೆ ಎಂದರು.
ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಯ, ಶಾಖಾ ಮಠದ ಪೂಜ್ಯರುಗಳಾದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ, ಶಿವಾನಂದಪುರಿ ಮಹಾಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಮಹಾಸ್ವಾಮೀಜಿ, ಸಮಾಜದ ಮುಖಂಡರಾದ ಹೆಚ್.ವಿಶ್ವನಾಥ್, ಸಚಿವರಾದ ಭೈರತಿ ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಕೆ.ಎಸ್.ಈಶ್ವರಪ್ಪ, ಬಂಡೆಪ್ಪ ಕಾಶಂಪುರ್, ಕೊಪ್ಪಳ ವಿವಿ ಕುಪಪತಿಗಳಾದ ಬಿ.ಕೆ.ರವಿ ಸೇರಿ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರ್ಕಾರದ ಅನುದಾನ ಬೇಡ-ಸಮಾಜದ ಬೆವರು ಸಾಕು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ, “ಶಾಖಾ ಮಠದ ನಿರ್ಮಾಣಕ್ಕೆ ನಾವು ಸರ್ಕಾರದ ಅನುದಾನ ಕೇಳುವುದಿಲ್ಲ, ಸಮಾಜದ ಬೆವರು ಮತ್ತು ಶ್ರಮ ಸಾಕು ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್ ಅವರು ಶ್ರೀಮಠದ ನಿರ್ಮಾಣಕ್ಕೆ ವೈಯುಕ್ತಿಕವಾಗಿ 50 ಲಕ್ಷ ರೂಗಳ ಅನುದಾನ ನೀಡುವುದಾಗಿ ಘೋಷಿಸಿದರು. ಬಳಿಕ ಹಲವರು ತಮ್ಮ ತಮ್ಮ ಶಕ್ತಿಯನುಸಾರ 50 ಸಾವಿರ ರೂಪಾಯಿಯಿಂದ 25 ಲಕ್ಷ ರೂಪಾಯಿವರೆಗೂ ತಮ್ಮ ನೆರವನ್ನು ಘೋಷಿಸಿದರು.
ಸಿದ್ದರಾಮಯ್ಯರ ಸರ್ಕಾರದ ಅನುದಾನದಲ್ಲಿ ನಾನು ಮತ್ತೆ ಶಾಸಕನಾದೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, 2013-18 ರ ಅವಧಿಯ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದೆ. ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ನೀಡುತ್ತೇನೆ ಎಂದು ಘೋಷಿಸಿದರು.