ಬೆಂಗಳೂರು, ಮೇ 24: ವಿಧಾನಸಭೆಯ ವಿಶೇಷ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಂಪುಟ ವಿಸ್ತರಣೆ ಕಸರತ್ತು ಆರಂಭಗೊಂಡಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸಮೇತ ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಸಚಿವರಾಗಿ ಯಾರನ್ನು ಮಾಡಬೇಕೆಂಬ ಪೈಪೋಟಿ ಕಳೆದ ವಾರದಿಂದ ನಡೆದಿದ್ದು, ವರಿಷ್ಠರ ಮಟ್ಟದಲ್ಲಿ ಅದು ಇತ್ಯರ್ಥವಾಗದ ಕಾರಣ ಎಂಟು ಸಚಿವರನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಈಗ ಕನಿಷ್ಠ 20 ಸಚಿವರ ಆಯ್ಕೆಗೆ ತಮ್ಮ ತಮ್ಮ ಪಟ್ಟಿ ಸಮೇತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
34 ಸಚಿವರ ಪೈಕಿ ಈಗಾಗಲೇ ಎಂಟು ಸಚಿವರನ್ನು ನೇಮಕ ಮಾಡಿದ್ದು, 20 ಶಾಸಕರನ್ನು ಸಚಿವರನ್ನಾಗಿ ಮಾಡಿ, ಬಾಕಿ ಸಚಿವ ಸ್ಥಾನ ಹಾಗೇ ಇಟ್ಟುಕೊಂಡು ನಂತರ ಬದಲಾಗುವ ರಾಜಕೀಯ ಸನ್ನಿವೇಶಗಳ ಆಧಾರದ ಮೇಲೆ ಉಳಿದವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಗೊತ್ತಾಗಿದೆ.
ಈಗಾಗಲೇ ದೆಹಲಿಗೆ ತೆರಳಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲಿತ ಶಾಸಕರ ಪಟ್ಟಿ ನೀಡಿ, ಅವರಿಗೆ ಸಚಿವ ಸ್ಥಾನ ನೀಡಬೇಕಾದ ತಮ್ಮ ಸಮರ್ಥನೀಯ ವಾದವನ್ನು ಮಂಡಿಸಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಮ್ಮ ಬೆಂಬಲಿತ ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಸೇರಿದಂತೆ ಕೆಲ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದು, ಇನ್ನೂ ಅವರ ಯಾರನ್ನೂ ಭೇಟಿ ಮಾಡಿದೆ ನೇರವಾಗಿ ಕರ್ನಾಟಕ ಭವನಕ್ಕೆ ತೆರಳಿದ್ದು, ಇಂದು ರಾತ್ರಿ ಅಥವಾ ನಾಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಇದರ ಜೊತೆಗೆ ಸಚಿವಾಕಾಂಕ್ಷಿಗಳಾದ ಲಕ್ಷ್ಮಣ ಸವದಿ, ದಿನೇಶ್ ಗುಂಡೂರಾವ್, ಡಾ.ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ್, ಕೃಷ್ಣ ಬೈರೇಗೌಡ, ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್, ಬಸನಗೌಡ ದದ್ದಲ್, ಶಿವರಾಜ್ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ ಸಮೇತರಾಗಿ 20ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಒತ್ತಡ ತಂದಿದ್ದಾರೆ.
ಲಿಂಗಾಯತ, ಒಕ್ಕಲಿಗ, ಹಿಂದುಳಿದ, ಅಲ್ಪಸಂಖ್ಯಾತರು, ಪರಿಶಿಷ್ಟ ಎಡ ಮತ್ತು ಬಲದ ಶಾಸಕರನ್ನು ಸಚಿವರನ್ನಾಗಿ ಸೇರಿಸಬೇಕಾಗಿರುವುದರಿಂದ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.
39 ಮಂದಿ ಲಿಂಗಾಯತರು, 21 ಒಕ್ಕಲಿಗರು, 8 ಕುರುಬರು, 7 ಮಂದಿ ಮುಸ್ಲಿಮರು, 3 ಜನ ಕ್ಷತಿಯರು, 15 ಮಂದಿ ವಾಲ್ಮೀಕಿ, 38 ಪರಿಶಿಷ್ಟ ಜಾತಿಯವರು ಜಯಗಳಿಸಿದ್ದಾರೆ. ಬಹುತೇಕರು ಮೂರಕ್ಕಿಂತ ಹೆಚ್ಚು ಬಾರಿ ಜಯಗಳಿಸಿದರೇ ಇರುವುದರಿಂದ ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂದು ಅಳೆದು ತೂಗಿ ನಿರ್ಧಾರ ಮಾಡಬೇಕಿದೆ.
ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳು ಹಾಗೂ ಒಂದು ವರ್ಷದ ಬಳಿಕ ಎದುರಾಗಲಿರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಾತಿವಾರು, ಪ್ರಾದೇಶಿಕವಾರು ಪಟ್ಟಿ ಸಿದ್ಧಪಡಿಸಬೇಕಾಗಿರುವುದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮದೇ ಆದ ಪ್ರತ್ಯೇಕ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದು, ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುಮ ಖರ್ಗೆ, ಪಕ್ಷದ ವರಿಷ್ಠ ರಾಹುಲ್ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚಿಸಲಿದ್ದಾರೆ.
ನಾಳೆ ಸಂಜೆವರೆಗೆ ಯಾರು ಸಚಿವರಾಗಬೇಕೆಂಬ ಬಗ್ಗೆ ನಿರ್ಧಾರವಾಗುವ ನಿರೀಕ್ಷೆ ಇದ್ದು, ಒಂದು ವೇಳೆ ನಾಳೆ ಬಗೆಹರಿಯದಿದ್ದರೆ, ನಾಡಿದ್ದು, ಶುಕ್ರವಾರ ಪಟ್ಟಿ ಅಂತಿಮಗೊಳಿಸಿಕೊಂಡು ಬೆಂಗಳೂರಿಗೆ ಆಗಮಿಸಿ ಶನಿವಾರ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಯಾರು ಸಚಿವರು ಆಗಲಿದ್ದಾರೆ ಎಂಬುದು ನಿರ್ಧಾರ ಮಾಡುವುದು ವರಿಷ್ಠರ ಅಂಗಳದಲ್ಲಿದ್ದು, ಬಲ್ಲ ಮೂಲಗಳ ಪ್ರಕಾರ ಈ ಕೆಳಗಿನಂತೆ ಶಾಸಕರು ಸಚಿವರಾಗಲು ಲಾಭಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಪಕ್ಷದ ವರಿಷ್ಠರು ಪಕ್ಷಕ್ಕಾಗಿ ಶ್ರಮಿಸಿದ ಕೆಲ ಮುಖಂಡರನ್ನು ಸೇರ್ಪಡೆ ಮಾಡಲು ತಮ್ಮದೇ ಆದ ಪಟ್ಟಿ ನೀಡಲು ನಿರ್ಧರಿಸಿದ್ದು, ಆ ಪೈಕಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸ್ರಾಜ್ ಅವರ ಹೆಸರು ಆ ಪಟ್ಟಿಯಲ್ಲಿದೆ ಎಂದು ಪಕ್ಷದ ಮೂಲಗಳು ದೃಢಪಡಿಸಿವೆ.
ಜೊತೆಗೆ ವಿಧಾನ ಪರಿಷತ್ನಿಂದ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮತ್ತು ಸಲೀಂ ಅಹಮದ್ ಹೆಸರುಗಳು ಸಹ ಚಾಲ್ತಿಯಲ್ಲಿದ್ದು, ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಕಾದು ನೋಡಬೇಕು.
ಸಚಿವಾಕಾಂಕ್ಷಿಗಳು:
ಆರ್.ವಿ. ದೇಶಪಾಂಡೆ
ಕೃಷ್ಣ ಬೈರೇಗೌಡ
ಶಿವಾನಂದ ಪಾಟೀಲ್
ತನ್ವೀರ್ ಸೇಠ್
ಎನ್.ಎಸ್. ಬೋಸ್ರಾಜ್
ಲಕ್ಷ್ಮಣ ಸವದಿ
ಲಕ್ಷ್ಮೀ ಹೆಬ್ಬಾಳ್ಕರ
ಚೆಲುವರಾಯ ಸ್ವಾಮಿ
ಬಿ.ಕೆ. ಹರಿಪ್ರಸಾದ್
ದಿನೇಶ್ ಗುಂಡೂರಾವ್
ಶಿವರಾಜ್ ತಂಗಡಗಿ
ಈಶ್ವರ ಖಂಡ್ರೆ
ಡಾ.ಶರಣ ಪ್ರಕಾಶ್ ಪಾಟೀಲ್
ಡಾ.ಅಜಯ್ ಸಿಂಗ್
ಬಸವರಾಜ ರಾಯರೆಡ್ಡಿ
ಹಂಪನಗೌಡ ಬಾದರ್ಲಿ
ಮಧು ಬಂಗಾರಪ್ಪ
ಎಚ್.ಕೆ. ಪಾಟೀಲ್
ಆರ್.ಬಿ. ತಿಮ್ಮಾಪುರೆ
ರಾಘವೇಂದ್ರ ಹಿಟ್ನಾಳ
ಬೈರತಿ ಸುರೇಶ್
ಸಂತೋಷ್ ಲಾಡ್