ಸುದ್ದಿಮೂಲ ವಾರ್ತೆ
ಬೆಂಗಳೂರು, ನ.2: ರಾಜ್ಯ ಬರಗಾಲದಿಂದ ತತ್ತರಿಸಿದ್ದು ಪರಿಹಾರ ನೀಡಬೇಕಾದ ಸಿದ್ಧರಾಮಯ್ಯ ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ವಾಗ್ಧಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರ ಸರ್ಕಾರದ ಚಕ್ರ ಪಂಕ್ಚರ್ ಆಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದನ್ನು ಬಿಟ್ಟು ಇನ್ನೇನೂ ಮಾಡಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯ ಬರಗಾಲದಿಂದ ತತ್ತರಿಸಿದೆ. ಆದರೆ ಬರಪೀಡಿತ ಪ್ರದೇಶಗಳ ಜನರ ಸಂಕಷ್ಟ ಕೇಳಲು ಮುಖ್ಯಮಂತ್ರಿಗಳಿಂದ ಹಿಡಿದು ಸಚಿವ ಸಂಪುಟದ ಯಾವ ಸಚಿವರೂ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿದ್ದು ಶಾಸಕರ ನಿಧಿಯಡಿ 2 ಕೋಟಿ ರೂಪಾಯಿ ಕೊಡಬೇಕಾದ ಸರ್ಕಾರ ಕೇವಲ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ವ್ಯಂಗ್ಯ ಆಡಿದರು.
ಅಧಿಕಾರಕ್ಕೆ ಬರುವ ಮುನ್ನ ಅಪಾರ ಆಶ್ವಾಸನೆ ನೀಡಿದವರು ಈಗ ಅದನ್ನು ಈಡೇರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರಿಗೆ ಪಕ್ಷದ ಮೇಲೆ ಹಿಡಿತವಿಲ್ಲ, ಸರ್ಕಾರದ ಮೇಲೆ ನಿಯಂತ್ರಣವಿಲ್ಲ ಎಂಬ ವಿಚಿತ್ರ ಪರಿಸ್ಥಿತಿ ಉದ್ಭವವಾಗಿದೆ ಎಂದು ಟೀಕಿಸಿದರು.
ಉಚಿತ ಬಸ್ ಪ್ರಯಾಣ ಯೋಜನೆ ಹೊರತುಪಡಿಸಿದರೆ ಉಳಿದಂತೆ ಯಾವ ಗ್ಯಾರಂಟಿ ಈಡೇರುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆಯ ಲಾಭ ಅರ್ಧದಷ್ಟು ಮಹಿಳೆಯರಿಗೂ ಸಿಗುತ್ತಿಲ್ಲ. ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದವರು ಈಗ ಭಾರೀ ಪ್ರಮಾಣದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಎಸ್.ಸಿ-ಎಸ್.ಟಿ ಯೋಜನೆಗಳ ಈಡೇರಿಕೆಗೆ ಹಣ ಕೊಡದ ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ ಸೇರಿದಂತೆ ಯಾವ ನಿಗಮಗಳಿಗೆ ಒಂದು ಪೈಸೆ ಹಾಕಿಲ್ಲ ಎಂದು ಕಿಡಿಕಾರಿದರು.
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮಾರ್ ಸಹಿತ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದ ಇವರು, ಈಗ ಈ ಯೋಜನೆಯನ್ನೇ ರದ್ದು ಮಾಡಿದೆ ಎಂದರಲ್ಲದೆ, ಕೃಷಿ ಪಂಪ್ ಸೆಟ್ಗಳ ಖರ್ಚನ್ನು ರೈತರೇ ಭರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೂಟಿಕೋರ ಸರ್ಕಾರ:
ಇತ್ತೀಚಿನ ಐಟಿ ದಾಳಿಯಲ್ಲಿ ನೂರು ಕೋಟಿ ರೂಪಾಯಿ ಸಿಕ್ಕಿದ್ದು ಸರ್ಕಾರದ ಭ್ರಷ್ಟಾಚಾರಗಳು ಇಂಚಿಂಚಾಗಿ ಬಯಲಾಗತೊಡಗಿವೆ. ಆ ಮೂಲಕ ಇದೊಂದು ಲೂಟಿಕೋರ ಸರ್ಕಾರವೆಂದು ಸಾಬೀತಾಗಿದೆ ಎಂದು ನುಡಿದರು.
ಸಿದ್ಧರಾಮಯ್ಯ-ಡಿಕೆಶಿ ಮಧ್ಯೆ ನಾಯಕತ್ವಕ್ಕಾಗಿ ಜಗಳ ನಡೆಯುತ್ತಿದೆ, ವರ್ಗಾವಣೆ ಧಂದೆ ಈಗಲೂ ಮುಂದುವರೆದಿದೆ. ಉಪಮುಖ್ಯಮಂತ್ರಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಿಸಲು ಇವರ ಕೈಲಿ ಸಾಧ್ಯವೇ ಆಗಿಲ್ಲ. ಹೀಗಾಗಿ ಕಳೆದೆರಡು ತಿಂಗಳುಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಲೇ ಇದ್ದಾರೆ ಎಂದು ಅವರು ವಿಷಾದಿಸಿದರು.
ರಾಜ್ಯವನ್ನು ಭೀಕರ ಬರಗಾಲ ಆವರಿಸಿರುವಾಗ ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಬೇಕಿತ್ತು.ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯತೊಡಗಿದ್ದಾರೆ ಎಂದು ವಿಷಾದಿಸಿದರು.
ಕಲೆಕ್ಷನ್ ಟಾರ್ಗೆಟ್:
ಇಷ್ಟೆಲ್ಲದರ ಮಧ್ಯೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಪದೇ ಪದೇ ರಾಕ್ಕೆ ಬಂದು ಕಲೆಕ್ಷನ್ ಟಾರ್ಗೆಟ್ ಕೊಟ್ಟುಹೋಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆತ ಅನುದಾನ ಮತ್ತು ಯೋಜನೆಗಳ ವಿವರ ನೀಡಿದ ಅವರು,ರಾಜ್ಯ ಸರ್ಕಾರದ ವೈಫಲ್ಯ ಜನರಿಗೆ ಸಂಕಷ್ಟ ತಂದೊಡ್ಡುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.