ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 13: ಈ ಬಾರಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದು, ಸಂತ ಬಲದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜನರು ಭ್ರಷ್ಟಾರದ ವಿರುದ್ಧ ಮತ ನೀಡಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗುತ್ತಿಗೆದಾರರ ಸಂಘ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿದರೂ ನಾ ಕಾವೂಂಗಾ, ನಾ ಖಾನೆದೂಂಗ ಎನ್ನುವ ಪ್ರಧಾನಿ ಏನೂ ಕ್ರಮ ಕೈಗೊಳ್ಳಲಿಲ್ಲ.
ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು 150 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಅವರಿಗೆ ಗೊತ್ತಿದ್ದರೂ ಸಹ ಸುಳ್ಳು ಹೇಳುತ್ತಿದ್ದರು. ಬಹಳಷ್ಟು ಗುಪ್ತಚರ ಏಜೆನ್ಸಿಗಳು ಇವೆ. ಅವರಿಗೆ ಸೋಲು ಎಂದು ಗೊತ್ತಿದ್ದರೂ ಹಣದ ಬಲದಿಂದ ಗೆಲ್ಲಬೇಕು ಎಂದು ಪ್ರಯತ್ನ ಮಾಡಿದ್ದರು. ಆದರೆ, ಜನರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರು ಎಂದು ಹೇಳಿದರು.
ರಾಜ್ಯದಲ್ಲಿ ಮೋದಿಯವರ ಪ್ರಭಾವ ಏನೂ ನಡೆದಿಲ್ಲ. ನೂರು ಬಾರಿ ಮೋದಿ ಬಂದರೂ, ಅಮಿತ್ ಶಾ ಬಂದರೂ ಕರ್ನಾಟಕದ ಮತದಾರರ ಮೇಲೆ ಏನೂ ಪರಿಣಾಮ ಬೀರಲ್ಲ ಎಂದು ಮೊದಲೇ ಹೇಳಿದ್ದೆ. ಅವರಿಗೆ ಇದು ಮುಂದಿನ ಲೋಕಸಭಾ ಚುನಾವಣೆಗೆ ಎಚ್ಚರಿಕೆಯ ಗಂಟೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇಡೀ ದೇಶದ ಜನ ಓಟು ಕೊಡುತ್ತಾರೆ.
ಸುಧಾಕರ್, ಎಸ್.ಟಿ. ಸೋಮಶೇಕರ್, ಎಂಟಿಬಿ ನಾಗರಾಜ್ ಸಹಿತ ಆಪರೇಷನ್ ಕಮಲಕ್ಕೆ ಒಳಗಾದ ಬಹುತೇಕರು ಸೋಲು ಅನುಭವಿಸಿದ್ದಾರೆ. ಕೆಲವರು ಗೆದ್ದಿರಬಹುದು. ಅಂತಹ ಕಡೆ ನಮ್ಮ ಪ್ರಬಲ ಅಭ್ಯರ್ಥಿಗಳು ಇರಲಿಲ್ಲ ಎಂದು ಹೇಳಿದರು.