ಚಾಮರಾಜನಗರ, ಜೂ. 20: ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿಯಾಗಿದ್ದು, ಪೂರ್ಣಾವಧಿಗೆ ಅವರೇ ಮುಂದುವರೆಯುತ್ತಾರೆ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಪೂರ್ಣಾವಧಿ ಸಿಎಂ ಚರ್ಚೆ ಇನ್ನೂ ನಿಂತಂತೆ ಕಾಣುತ್ತಿಲ್ಲ.
ಇಂತಹ ಹೇಳಿಕೆ ವಿರುದ್ಧ ಸಂಸದ ಡಿ.ಕೆ. ಸುರೇಶ್ ಸೋಮವಾರವಷ್ಟೇ ಗರಂ ಆಗಿ ಸಚಿವ ಮಹದೇವಪ್ಪ ವಿರುದ್ಧ ಹರಿಹಾಯ್ದಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಬೆಂಬಲಿಗರು ಮತ್ತೆ ಈ ಚರ್ಚೆಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಆಂತರಿಕ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ.
ಚಾಮರಾಜನಗರದಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿಯಾಗಿದ್ದಾರೆ. ಮುಂದೂ ಸಹ ಅವರೇ ಸಿಎಂ ಆಗಿರಲಿದ್ದಾರೆ. ಯಾವುದೇ ಬದಲಾವಣೆ ಇಲ್ಲ ಎಂದು ಎಂದರು.
ಸಿಎಂ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಆಗಾಗ ಪೂರ್ಣಾವಧಿ ಸಿಎಂ ಪ್ರಸ್ತಾಪ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಈಚೆಗಷ್ಟೇ ಸಚಿವ ಎಚ್.ಸಿ. ಮಹದೇವಪ್ಪ ಅವರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷವೂ ಆಡಳಿತ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಗ್ರರಾಗಿದ್ದ ಸಂಸದ ಡಿ.ಕೆ. ಸುರೇಶ್, ಮಹದೇವಪ್ಪ ಅವರಿಗೆ ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ವಿಷಯಗಳ ಬಗ್ಗೆಯೇ ಆಸಕ್ತಿ ಜಾಸ್ತಿ ಎಂದು ವ್ಯಂಗ್ಯವಾಡಿದ್ದರು.
image.png