ಗದಗ, ಜ.19 : ನಾವು ಅಧಿಕಾರಕ್ಕೆ ಬಂದ ಮೇಲೆ ಒಂದು ವಿಶೇಷ ತನಿಖಾ ಆಯೋಗವನ್ನು ರಚನೆ ಮಾಡಿ, ಬಿಜೆಪಿ ಅವಧಿಯಲ್ಲಿ ಯಾರೆಲ್ಲ ಲೂಟಿ ಹೊಡೆದಿದ್ದಾರೆ ಅವರೆಲ್ಲರಿಗೂ ಕಠಿಣ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.
ಗದಗದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು:
ಬಿಜೆಪಿಯವರಿಗೆ ಅಧಿಕಾರ ಕಳೆದುಕೊಳ್ಳುವ ಭಯ ಶುರುವಾಗಿದೆ. ಹೆಚ್ಚು ಎಂದರೆ ಬೊಮ್ಮಾಯಿ ಅವರ ಅಧಿಕಾರ ನೂರೇ ನೂರು ದಿನ. ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅಧಿಕಾರದಲ್ಲಿದ್ದಾಗ ಮಾಡಿದ ಪ್ರಾಯಶ್ಚಿತವನ್ನು ಮಾಡಿಕೊಳ್ಳಬೇಕಾಗುತ್ತದೆ. ಅವರನ್ನು ಅಧಿಕಾರದಿಂದ ಇಳಿದ ಮೇಲೆ ಸುಮ್ಮನೆ ಮನೆಗೆ ಹೋಗಲು ನಾವು ಬಿಡಲ್ಲ. ಇದು ಬೇರೆಯವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಇದು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಕೋಟ್ಯಂತರ ರೂಪಾಯಿ ಕೊಟ್ಟು ಖರೀದಿಸಿ ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ. ಈ ಹಣ ಲೂಟಿಯ ಹಣ. ಬೊಮ್ಮಾಯಿ ಮತ್ತು ಅವರ ಮಂತ್ರಿಮಂಡಲ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟ ಎಂದು ಕುಟುಕಿದರು.
ಬೆಳಗಾವಿಯ ಚಿಕ್ಕೋಡಿಯಿಂದ ನಮ್ಮ ಪ್ರಜಾಧ್ವನಿ ಯಾತ್ರೆಯನ್ನು ಆರಂಭ ಮಾಡಿದ್ದೇವೆ, ಇಂದಿಗೆ ಒಟ್ಟು ಜಿಲ್ಲೆಗಳಲ್ಲಿ ನಮ್ಮ ಪ್ರವಾಸ ಮುಗಿದಿದೆ. ಇಂದು ಗದಗದಲ್ಲಿ ವ್ಯಕ್ತವಾಗುತ್ತಿರುವ ಉತ್ಸಾಹ ಹಿಂದಿನ ಎಂಟೂ ಜಿಲ್ಲೆಗಳಲ್ಲಿ ಜನರಿಂದ ವ್ಯಕ್ತವಾಗಿದೆ. ನಾನು 2008, 2013, 2018 ರಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದೆ, ಆದರೆ ಈ ಬಾರಿ ಜನರಿಂದ ವ್ಯಕ್ತವಾಗುತ್ತಿರುವ ಸ್ಪಂದನೆ ಹಿಂದೆಂದೂ ಕಂಡಿರಲಿಲ್ಲ. ಇದರಿಂದ
ಗದಗದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿರುವ ಜನರ ಉತ್ಸಾಹವನ್ನು ನೋಡಿದರೆ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎನ್ನಿಸುತ್ತಿದೆ. ಕಳೆದ ಬಾರಿ ಗದಗದ 4 ವಿಧಾಸನಭಾ ಕ್ಷೇತ್ರಗಳಲ್ಲಿ ಹೆಚ್.ಕೆ ಪಾಟೀಲರು ಮಾತ್ರ ಗೆದ್ದಿದ್ದರು, ಆದರೆ ಈ ಬಾರಿ ಜನರ ಒಲವನ್ನು ನೋಡಿದರೆ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ.
ಇಂದು ಗದಗದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿದ್ದರೆ ಅದು ಹೆಚ್.ಕೆ ಪಾಟೀಲರು ನನ್ನ ಮಂತ್ರಿಮಂಡಲದಲ್ಲಿ ಸಚಿವರಾಗಿ ಮಾಡಿದ್ದು. 1,056 ಕೋಟಿ ರೂ. ಖರ್ಚು ಮಾಡಿ ಸುಮಾರು 358 ಗ್ರಾಮಗಳಿಗೆ ಕೊಳವೆ ನೀರಿನ ಮೂಲಕ ಕುಡಿಯುವ ನೀರನ್ನು ಕೊಟ್ಟಿದ್ದು ನಮ್ಮ ಸರ್ಕಾರ. ಇದಕ್ಕೆ ಪಾಟೀಲರ ಶ್ರಮ ಕಾರಣ. ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪಾಟೀಲರು ಯೋಜನೆ ಸಿದ್ಧಮಾಡಿ, ನನ್ನನ್ನು ಒಪ್ಪಿಸಿ ಯೋಜನೆ ಜಾರಿ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮಲಪ್ರಭ ಮತ್ತು ತುಂಗಭದ್ರಾ ನದಿಗಳಿಂದ ಇಡೀ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೆ ಅದು ಗದಗ ಜಿಲ್ಲೆಯಲ್ಲಿ ಮಾತ್ರ.
ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಾಡಬೇಕು ಎಂದು ಎರಡು ಮೂರು ಬಾರಿ ನನ್ನನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು. ನಾನು ಅವರ ಮಾತನ್ನು ಒಪ್ಪಿಕೊಂಡು ಇಡೀ ದೇಶದಲ್ಲೇ ಮೊದಲ ವಿಶ್ವವಿದ್ಯಾಲಯವಾಗಿ ಗದಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿಕೊಟ್ಟಿದ್ದು ನಮ್ಮ ಸರ್ಕಾರ. ಗದಗದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದು ನಮ್ಮ ಸರ್ಕಾರ. ಕೊರೊನಾ ಬಂದಾಗ ಈ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇಲ್ಲದೆ ಹೋಗಿದ್ದರೆ ಇನ್ನಷ್ಟು ಜನ ಸಾಯುತ್ತಿದ್ದರು ಎಂದು ಜನರೇ ಹೇಳುತ್ತಿದ್ದಾರೆ. ಬೊಮ್ಮಾಯಿ ನೀನೆನಪ್ಪಾ ಮಾಡಿದ್ದೀಯಾ?
ಗದಗ, ಬೆಟಗೇರಿಯಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಕೊಡುತ್ತಿದ್ದಾರೆ, ಆದರೆ ಅದು ಸಮರ್ಪಕವಾಗಿ ಸಿಗುತ್ತಿಲ್ಲ ಹಾಗಾಗಿ ನಮಗೆ ಮಲಪ್ರಭಾ ನದಿಯಿಂದ ನೀರು ಕೊಡಿ ಎಂದು ನನಗೆ ಮನವಿ ನೀಡಿದ್ದಾರೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆಯನ್ನು ಜಾರಿ ಮಾಡಿ 24*7 ಕುಡಿಯುವ ನೀರನ್ನು ಕೊಡುತ್ತೇವೆ. ಸಿಂಗತಾಲೂರು ಏತ ನೀರಾವರಿ ಯೋಜನೆಯಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ಸರಿಪಡಿಸಿ ರೈತರ ಜಮೀನಿಗೆ ಅಗತ್ಯ ಪ್ರಮಾಣದಲ್ಲಿ ನೀರು ಕೊಡುತ್ತೇವೆ.
ಮಹಾದಾಯಿಗೆ 3000 ಕೋಟಿ ಖರ್ಚು ಮಾಡಲು ಸಿದ್ಧ:
ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿಯವರು ಕೇಂದ್ರದ ಜಲ ಆಯೋಗವು ಮಹದಾಯಿ ಯೋಜನೆಯ ಡಿಪಿಆರ್ ಗೆ ಅನುಮತಿ ನೀಡಿದೆ ಎಂದು ನಾಟಕ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ 2000 ಕೋಟಿ ಅಲ್ಲ 3000 ಕೋಟಿ ರೂ. ಆದರೂ ಹಣ ಖರ್ಚು ಮಾಡಿ ಈ ಯೋಜನೆಯನ್ನು ಪೂರ್ಣಗೊಳಿಸಿ ಬೆಳಗಾವಿ, ಗದಗ ಭಾಗದ ಜನರಿಗೆ ನೀರು ಕೊಡುತ್ತೇವೆ.
ನಾನು ಮುಖ್ಯಮಂತ್ರಿಯಾಗಿದ್ದೆ, 13 ಬಜೆಟ್ ಗಳನ್ನು ಮಂಡಿಸಿದ್ದೆ, ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ, ನನ್ನ ಈ ಅಧಿಕಾರವಾಧಿಯಲ್ಲಿ ಎನ್,ಒ,ಸಿ ರಿಸೀಸ್ ಮಾಡಲು ಒಂದು ಪೈಸೆ ಲಂಚ ಕೇಳಿದ್ದಾರೆ ಎಂದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇಲ್ಲಿ ಸಭೆಯಲ್ಲಿ ಬಹಳಷ್ಟು ಜನ ಶಾಸಕರು ಇದ್ದಾರೆ, ಇವರೆಲ್ಲರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದೆ, ನನ್ನ ಬಗ್ಗೆ ಇವರಿಗೆ ಚೆನ್ನಾಗಿ ಗೊತ್ತಿದೆ.
ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು, ಈಗಿರುವ ಸೋಗಲಾಡಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕಿತ್ತುಹಾಕಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ.