ಬೆಂಗಳೂರು, ಜೂ.6: ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಿಳಿಸಿದರು.
ಅವರು ಇಂದು ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಗಳ ಮಠಾಧೀಶರ ಒಕ್ಕೂಟದ ನಿಯೋಗದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರವು ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್ ಆಗಿದೆ. ಮೀಸಲಾತಿ ಹೆಚ್ಚಳ ಕುರಿತ ಕಾಯ್ದೆ ಜಾರಿಗೊಳಿಸಿದರೂ ಅದನ್ನ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರ್ಪಡೆಗೊಳಿಸಲು ಚುನಾವಣೆ ಘೋಷಣೆಯ ಎರಡು ದಿನ ಮೊದಲಷ್ಟೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ನೆಪದಲ್ಲಿ ಹಿಂದಿನ ಸರ್ಕಾರ ಗೊಂದಲ ಸೃಷ್ಟಿಸಿದೆ.
ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಕಲ್ಪಿಸುವಂತೆ ತಾವು ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ವಿವಿಧ ಸಮುದಾಯಗಳ ವಿರೋಧ ಎದುರಿಸುವಂತಾಯಿತು. ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲದೆ ಹೋದರೆ ಇಂತಹ ಗೊಂದಲಗಳಾಗುತ್ತವೆ. ಜನಸಂಘ ಹಾಗೂ ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿ ನಿಲುವನ್ನೇ ಹೊಂದಿದ್ದವು. ಈಗ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯ ಗಿಮಿಕ್. ಇದರ ಕುರಿತು ನಾವು ಎಚ್ಚರದಿಂದಿರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಮ್ಮ ಸರ್ಕಾರವು ಮೀಸಲಾತಿಯಲ್ಲಿನ ಎಲ್ಲ ಗೊಂದಲಗಳನ್ನು ಸರಿಪಡಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕದಲ್ಲಿ ಜನ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಹಿಂದಿನ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವತ್ತೂ ಜಾತ್ಯತೀತ ಪಕ್ಷವಾಗಿದ್ದು, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಸಾಮಾಜಿಕ ನ್ಯಾಯದ ನಿಲುವಿನಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಾತಿವಾರು ಸಮೀಕ್ಷೆ ವರದಿ ಸ್ವೀಕಾರ
ಐತಿಹಾಸಿಕ ಕಾರಣಗಳಿಂದಾಗಿ ಶತ ಶತಮಾನಗಳಿಂದ ಅವಕಾಶ ವಂಚಿತರಿಗೆ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು.
ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ ಎಂದು ತಿಳಿಸಿದರು.
ಸರ್ಕಾರ ಎಲ್ಲ ವರ್ಗಗಳ ಬಡವರ ಪರ
ನಮ್ಮ ಸರ್ಕಾರ ಎಲ್ಲ ವರ್ಗದವರ ಪರವಾಗಿದೆ. ಹಿಂದೆ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೆವು. ಇದೀಗ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ಸುಮಾರು 59,000 ಕೋಟಿ ರೂ. ವಾರ್ಷಿಕವೆಚ್ಚವಾಗಲಿದೆ ಎಂದು ತಿಳಿಸಿದರು.