ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.12: ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ವಿರೋಧ ಪಕ್ಷದಲ್ಲಿದ್ದಾಗ ಯಾವುದೇ ಸಚಿವರ ಮನೆಗೆ ಹೋಗಿದ್ದಾಗಲಿ, ಹೊಂದಾಣಿಕೆ ಮಾಡಿಕೊಂಡಿದ್ದಾಗಲಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಯ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದಾಗ, ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಂಧ್ಯ ಪ್ರವೇಶಿಸಿದ ಬಸವರಾಜ ಪಾಟೀಲ್ ಯತ್ನಾಳ ಅವರನ್ನು ಉದ್ದೇಶಿಸಿ ನೀವು ವಿರೋಧ ಪಕ್ಷದ ನಾಯಕರು ಆಗುವುದಿಲ್ಲ. ನಿಮ್ಮನ್ನು ಮಾಡುವುದಿಲ್ಲ ಎಂದು ಏಕೆ ಮಧ್ಯೆ ಮಧ್ಯೆ ಎದ್ದು ಮಾತನಾಡುತ್ತೀರಿ ಎಂದು ಸಿದ್ದರಾಮಯ್ಯ ಅವರು ಯತ್ನಾಳ್ ಕಾಲೆಳೆದರು.
ಅದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಾನು ಪ್ರತಿಪಕ್ಷದ ನಾಯಕ ಆಗುವುದಿಲ್ಲ ಎಂದು ನಿಖರವಾಗಿ ನೀವು ಹೇಳುತ್ತಿರುವುದು ಗಮನಿಸಿದರೆ ನೀವು ಯಾರೊಂದಿಗೋ ಹೊಂದಾಣಿಕೆ ಮಾಡಿಕೊಂಡಂತೆ ಕಾಣಿಸುತ್ತಿದೆ ಎಂದು ತಿರುಗೇಟು ನೀಡಿದರು.
ಆ ಸಂದರ್ಭದಲ್ಲಿ ಸಿದ್ದರಾಮಯ್ಯ, 1983 ರಿಂದ ಸದನದಲ್ಲಿದ್ದೇನೆ, ನನ್ನ ಜತೆ ಸದನಕ್ಕೆ ಬಂದವರಲ್ಲಿ ಬಿ.ಆರ್ ಪಾಟೀಲ್, ದೇಶಪಾಂಡೆ ಬಿಟ್ಟು ಬೇರೆಯವರ್ಯಾರು ಇಲ್ಲ. ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹಜ್ಯೋತಿ ಯೋಜನೆಯಡಿ 1 ವರ್ಷದ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಂಡು 200 ಯೂನಿಟ್ವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.ಅನ್ನಭಾಗ್ಯ ಗ್ಯಾರಂಟಿಯಡಿ 1 ಕೋಟಿ 28 ಲಕ್ಷ ಕುಟುಂಬಗಳ 4 ಕೋಟಿ 48 ಲಕ್ಷ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವವರೆಗೆ ತಲಾ 120 ರೂ.ಗಳನ್ನು ಡಿಪಿಟಿ ಮೂಲಕ ತಲುಪಿಸುತ್ತೇವೆ ಎಂದರು.
ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳ ಬ್ಯಾಂಕ್ ಖಾತೆಗಳೇ ನಮ್ಮ ಬಳಿಯಲ್ಲಿ ಇಲ್ಲ ಎನ್ನುವ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಯ ಹೆಸರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದರು.