ಸುದ್ದಿಮೂಲ ವಾರ್ತೆ
ಬೆಂಗಳೂರು, ಜು. 6: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ವೇತನ ಪರಿಷ್ಕರಣೆಗೆ ಸಂಬಂಧಿಸಿಂತೆ ನೇಮಿಸಲಾಗಿರುವ ಸಮಿತಿಯು ತನ್ನ ಕಾಲಾವಕಾಶವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ ಆ ಸಮಿತಿ ವರದಿ ನೀಡಿದ ಬಳಿಕ, ಸರ್ಕಾರದ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ಈಗಾಗಲೇ ಶೇ.18ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಿದೆ. ಏರುತ್ತಿರುವ ಬೆಲೆಗಳಿಗೆ ತಕ್ಕಂತೆ ಸರ್ಕಾರಿ ನೌಕರರ ವೇತನವೂ ಹೆಚ್ಚಳವಾಗಬೇಕು ಎಂಬುದು ನಮ್ಮ ಆಶಯ. ವರದಿ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ 7.69 ಲಕ್ಷ ಮಂಜೂರಾದ ಹುದ್ದೆಗಳಿದ್ದರೆ, ಅದರಲ್ಲಿ ಸುಮಾರು 2.5 ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ. ಎಲ್ಲಾ ಹುದ್ದೆಗಳನ್ನೂ ಒಂದೇ ಸಾರಿ ತುಂಬುತ್ತೇವೆ ಎಂದು ಹೇಳುವುದಿಲ್ಲ. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿದರು.
ಮಧ್ಯ ಪ್ರವೇಶಿಸಿದ ನಾರಾಯಣಸ್ವಾಮಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾಗಿ ರಾಜ್ಯಸರ್ಕಾರಿ ನೌಕರರ ವೇತನವನ್ನೂ ನಿಗದಿಪಡಿಸಿ ಎಂದು ಮನವಿ ಮಾಡಿದರು. ಅದಕ್ಕೆ ಸಿಎಂ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುತ್ತದೆ. ಆದರೆ, ರಾಜ್ಯ ಸರ್ಕಾರ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕಣೆ ಮಾಡುತ್ತದೆ ಎಂದು ಹೇಳಿದರು.