ಸುದ್ದಿಮೂಲ ವಾರ್ತೆ
ಮೈಸೂರು, ಮೇ 5: ಚುನಾವಣೆ ಸಮೀಸುತ್ತಿದ್ದಂತೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಂದು ರೀತಿಯಲ್ಲಿ ಸ್ಟಾರ್ ವಾರ್ ಶುರುವಾಗಿದೆ. ನಟ ಶಿವರಾಜ್ ಕುಮಾರ್ ಬಂದು ಹೋದ ಬೆನ್ನಲ್ಲೆ ಶುಕ್ರವಾರ ನಟರಾದ ಕಿಚ್ಚ ಸುದೀಪ್, ದುನಿಯಾ, ವಿಜಿ, ಲೂಸ್ ಮಾದ ಖ್ಯಾತಿಯ ಯೋಗೀಶ್ ಮತ್ತು ನಟಿ ಅಶ್ವಿನಿ ನಾಯ್ಡು ಎರಡು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದರು.
ವರುಣಾ ಕ್ಷೇತ್ರದ ಚಿಕ್ಕಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ತೆರೆದ ವಾಹನದಲ್ಲಿ ಪ್ರಚಾರದ ಮೂಲಕ ಮತಯಾಚನೆ ಮಾಡಿದರು. ನಟ ದುನಿಯಾ ವಿಜಯ್, ಖ್ಯಾತಿಯ ಯೋಗಿ, ನಟಿ ನಿಶ್ವಿಕ ನಾಯ್ಡು ಸಾಥ್ ನೀಡಿದರು. ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಿದ್ದರಾಮಯ್ಯನವರು ನಟರೊಂದಿಗೆ ಮಾತ್ರವೇ ತಾವು ಕೂಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯ ವಿ.ಸೋಮಣ್ಣ ಕೂಡ ಜೋರಾಗಿಯೇ ಪ್ರಚಾರ ನಡೆಸುತ್ತಿದ್ದಾರೆ.
ಲಘು ಲಾಠಿ ಚಾರ್ಜ್:
ಚಾಮರಾಜನಗರ ಸಂತೇಮರಹಳ್ಳಿ ವೃತ್ತದ ಬಳಿ ಪ್ರಚಾರದ ವೇಳೆ ಸುದೀಪ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಚಾರ್ಜ್ ನಡೆಸಿದರು.
ಆಯತಪ್ಪಿ ಕಾರಿನಿಂದ ಬಿದ್ದ ವಿ.ಸೋಮಣ್ಣ
ಪ್ರಚಾರದಲ್ಲಿ ಸುದೀಪ್ ಜೊತೆ ವಿ.ಸೋಮಣ್ಣ ಕಾರಿನ ಮೇಲೆ ಜನರತ್ತ ಕೈ ಬೀಸುತ್ತಿದ್ದರು. ಈ ವೇಳೆ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದರು. ಈ ಸಮಯದಲ್ಲಿ ಆಯತಪ್ಪಿ ಸೋಮಣ್ಣರನ್ನು ಎಳೆದುಕೊಂಡು ಕೆಳಗೆ ಬಿದ್ದ. ಈ ವೇಳೆ ಕಾರಿನ ಟಾಟ್ನಿಂದ ಕೆಳಗೆ ಬೀಳದಂತೆ ಸೋಮಣ್ಣರನ್ನ ಅಲ್ಲಿದ್ದಅಕ್ಕಪಕ್ಕದವರು ಹಿಡಿದುಕೊಂಡರು.
ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟರು.
ವರುಣಾ ಕ್ಷೇತ್ರದಲ್ಲಿ 2008ರಲ್ಲಿ ಗೆದ್ದು ವಿರೋಧ ಪಕ್ಷ ನಾಯಕನಾದೆ. 2013ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದೆ. ಈಗ ಮತ್ತೊಂದು ಅವಕಾಶ ಇದೆ ಪ್ರಚಾರದ ವೇಳೆ ಉತ್ತಮ ಸ್ಪಂದನೆ ಸಿಕ್ಕಿದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿದರು.