ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 21 : ಹೊಸೂರು ಮತ್ತು ಮಡಿವಾಳ ನಡುವೆ ಸಂಪರ್ಕ ಕಲ್ಪಿಸುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅ.21 ರಿಂದ 4 ತಿಂಗಳ ಕಾಲ ಭಾಗಶಃ ಮುಚ್ಚಲಾಗುತ್ತಿದೆ.
ಬಿಎಂಆರ್ಸಿಎಲ್ ಈ ಕುರಿತು ಪ್ರಕಟಣೆ ನೀಡಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆ ಅಪ್ ಆಂಡ್ ಡೌನ್ ರ್ಯಾಂಪ್ ಕ್ಯಾರೇಜ್ ವೇ (ಮಡಿವಾಳ ಬದಿ) ಲೂಪ್ಗಳು ಮತ್ತು ರ್ಯಾಂಪ್ ಫ್ಲೈಓವರ್ ಸ್ಟೇಜಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈ ಓವರ್ ಅನ್ನು 4 ತಿಂಗಳ ಕಾಲ ಭಾಗಶಃ ಮುಚ್ಚಲಾಗುತ್ತಿದೆ ಎಂದು ತಿಳಿಸಿದೆ.
ಹೊರವರ್ತುಲ ರಸ್ತೆಯ ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್.ಪುರ- ಹೆಬ್ಬಾಳ ನಡುವೆ ಮೆಟ್ರೋ ನಿರ್ಮಾಣ ಕಾರ್ಯ ಕ್ಷಿಪ್ರವಾಗಿ ಸಾಗಿದೆ. ಇದಕ್ಕೆ ಪೂರಕ ಕಾಮಗಾರಿಗಳನ್ನು ನಡೆಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾಗಶಃ ಎಂದರೆ 11 ಮೀಟರ್ ಅಗಲದ ಮೇಲ್ಸೇತುವೆಯ ಎರಡೂ ಬದಿಯಲ್ಲಿ ತಲಾ ಎರಡೂವರೆ ಮೀಟರ್ ಕಾಮಗಾರಿಗಾಗಿ ಮುಚ್ಚಲ್ಪಡುತ್ತದೆ. ಉಳಿದ 6 ಮೀಟರ್ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.
ಮೆಟ್ರೋ ಕಾಮಗಾರಿಗಳು ಎಂದರೆ, ಈ ಫೈಓವರ್ನ ಅಪ್ ಮತ್ತು ಡೌನ್ ರಾಂಪ್ ಕ್ಯಾರೇಜ್ ವೇ (ಮಡಿವಾಳ ಬದಿ) ಲೂಪ್ಗಳು ಮತ್ತು ರಾಂಪ್ ಫೈಓವರ್ ಸ್ಟೇಜಿಂಗ್ ಕಾಮಗಾರಿ ನಡೆಯಲಿದೆ. ಹೀಗಾಗಿ ಬ್ಯಾರಿಕೇಡ್ ಇರಿಸುವ ಕಾರಣ ಈ ಭಾಗದಲ್ಲಿ ಅಪಾರ ಸಂಚಾರ ದಟ್ಟಣೆ ಉಂಟಾಗಬಹುದು.