ಸುದ್ದಿಮೂಲವಾರ್ತೆ
ಕೊಪ್ಪಳ ಸೆ 14: ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಸೆಪ್ಟಂಬರ್ 15 ರಿಂದ ಅಕ್ಟೋಬರ್ 02 ರವೆರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ತಿಳಿಸಿದ್ದಾರೆ.
ಅಕ್ಟೋಬರ್ 02ರ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ `‘ಸ್ವಚ್ಛ ಭಾರತ ದಿನ’’ ವನ್ನಾಗಿ ಆಚರಿಸಲಾಗುತ್ತಿದೆ. ಗಾಂಧೀಜಿ ರವರ ಧ್ಯೇಯವಾಕ್ಯ ‘ಸ್ವಚ್ಛತೆಯೇ ದೈವತ್ವ’ ಎಂಬ ಕನಸನ್ನು ನನಸಾಗಿಸಲು ಸೆಪ್ಟಂಬರ್ 15 ರಿಂದ ಅಕ್ಟೋಬರ್ 02ರ ವರೆಗೆ 17 ದಿನಗಳ ವರೆಗೆ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ ಸ್ವಚ್ಛತೆಯೇ ಸೇವೆ’ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲು ಕೇಂದ್ರ ಜಲಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತೀರ್ಮಾನಿಸಲಾಗಿದೆ.
ಈ ವರ್ಷದ ‘ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ’ ಎಂಬ ವಿಶೇಷ ಆಂದೋಲನದ ಘೋಷವಾಕ್ಯವಾಗಿ ‘ಕಸಮುಕ್ತ ತ್ಯಾಜ್ಯಮುಕ್ತ ಭಾರತ’ ಎಂದು ಘೋಷಿಸಲಾಗಿದ್ದು, ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಕಳೆದ ವರ್ಷದಂತೆಯೇ ಗ್ರಾಮಗಳ ಸ್ವಚ್ಛತೆಗೆ ಸ್ವಯಂಪ್ರೇರಿತರಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಜಿಲ್ಲೆಯ ತಾಲ್ಲೂಕು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹೆಚ್ಚು ಜನ ಜಂಗುಳಿಯಿರುವ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಕೆರೆ, ಹಳ್ಳ, ನದಿ ತೀರ, ಸಾಂಸ್ಥಿಕ ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು ಮತ್ತು ನಾಲಾಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಬಳಕೆಯನ್ನು ನಿಷೇಧದ ಹಾಗೂ ಇತರ ವಿಷಯಗಳ ಕುರಿತು ಜಾಗೃತಿ, ದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳು, ಎನ್.ಜಿ.ಓ., ಎಸ್.ಹೆಚ್.ಜಿ., ನೆಹರೂ ಯುವ ಕೇಂದ್ರ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಬಂಧಿತ ಪಾಲುದಾರರೊಂದಿಗೆ ತಮ್ಮ ಹಂತದಲ್ಲಿ ‘ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆ’ ಜನಾಂದೋಲವನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯ ಸಾರ್ವಜನಿಕರು ಈ ಜನಾಂದೋಲನದಲ್ಲಿ ಪಾಲ್ಗೊಂಡು ಸಧೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಪಂ ಸಿಇಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.