ಸುದ್ದಿಮೂಲ ವಾರ್ತೆ
ಶಿರಸಿ, ಏ.2: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಮುಂದುವರಿದಿದ್ದು, ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯ ಕಚೇರಿಯಲ್ಲಿ ಭಾನುವಾರ ಭೇಟಿ ಮಾಡಿದ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ವೇಳೆ ಕಾಗೇರಿ ಹಾಗೂ ಶಿವಲಿಂಗೇಗೌಡ ಅವರು ವಿಧಾನಸಭೆ ಅಧಿವೇಶನದ ವೇಳೆ ಜನಪರವಾಗಿ ಆಡಿದ ಮಾತುಗಳನ್ನು ಪರಸ್ಪರ ಶ್ಲಾಘಿಸಿದರು.
ಶಿವಲಿಂಗೇಗೌಡರ ಜೊತೆ 300ಕ್ಕೂ ಅಧಿಕ ಬೆಂಬಲಿಗರು ಆಗಮಿಸಿದ್ದರು. 2008ರಲ್ಲಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು.
ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಈಗಾಗಲೇ ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ ಅವರು ಈಗ ಪಕ್ಷದಿಂದಲೇ ದೂರವಾಗಿದ್ದಾರೆ. ಪಕ್ಷದಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು. ಇದೀಗ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ.
ಅರಸೀಕರೆ ಕಾಂಗ್ರೆಸ್ ಟಿಕೆಟ್ ಖಚಿತ:
ಈ ವೇಳೆ ಮಾತನಾಡಿದ ಶಿವಲಿಂಗೇಗೌಡ ಅವರು, ಜೆಡಿಎಸ್ ನಾಯಕರ ಜೊತೆ ಕೆಲ ಚಿಕ್ಕಪುಟ್ಟ ಭಿನ್ನಮತ ಇತ್ತು. ಆದರೆ, ಅದನ್ನು ನಿವಾರಿಸಲು ಪಕ್ಷದ ವರಿಷ್ಠರಿಗೆ ಸಾಧ್ಯವಾಗಲಿಲ್ಲ. ಸಾಕಷ್ಟು ಮಾತುಕತೆಯ ನಂತರವೂ ಯಾವುದೇ ಪ್ರಯೋಜನವಾಗಲಿಲ್ಲ. ಇಂಥ ಸನ್ನಿವೇಶದಲ್ಲಿ ಪಕ್ಷ ಬಿಡುವುದು ಅನಿವಾರ್ಯವಾಗಿತ್ತು. ಹೀಗಾಗಿ ರಾಜೀನಾಮೆ ನೀಡಿದ್ದು, ಕ್ಷೇತ್ರದ ಜನರ ಅಭಿಪ್ರಾಯದಂತೆ ಕಾಂಗ್ರೆಸ್ ಸೇರಲಿದ್ದೇನೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕ್ಷೇತ್ರಕ್ಕೆ ತೆರಳಿ ಜನರ ಬಳಿ ಬಹುಮತ ಕೇಳುತ್ತೇನೆ ಎಂದು ಹೇಳಿದರು.
ಅರಸಿಕೆರೆಯಿಂದ ಕಾಂಗ್ರೆಸ್ ಟಿಕೆಟ್ ಈಗಾಗಲೇ ಖಚಿತವಾಗಿದೆ. ಈಗಾಗಲೇ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಸಹ ಅಂತಿಮವಾಗಿದ್ದು, ನಿಶ್ಚಿತವಾಗಿ ಗೆಲುವು ಪಡೆಯುತ್ತೇನೆ. ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದರು.
ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣತಮ್ಮಂದಿರೇ ಬೇರೆಯಾಗ್ತಾರೆ. ಋಣವಿದ್ದಷ್ಟು ದಿನ ಇರುತ್ತಾರೆ. ಋಣ ತೀರಿದ ಮೇಲೆ ಅವರವರ ದಾರಿಗೆ ಹೋಗಿತ್ತಾರೆ. ನಾನು ಕ್ಷೇತ್ರದ ಜನರು ಹೇಳಿದಂತೆ ರಾಜೀನಾಮೆ ನೀಡಿದ್ದೇನೆ. ಹಾಗಾಗಿ ಪಕ್ಷಾಂತರದ ಬಗ್ಗೆ ಯಾರೂ ತಪ್ಪು ತಿಳಿಯಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಯಾರು ಬೇಕಾದರೂ ಸವಾಲು ಹಾಕಲಿ, ಏನಾದರೂ ಮಾಡಲಿ. ನಾನು ಮಾತ್ರ ಸುಮ್ಮನಿದ್ದು ಎಲ್ಲವನ್ನೂ ಕ್ಷೇತ್ರದ ಜನರಿಗೆ ಬಿಡುತ್ತೇನೆ ಎಂದರು.