ಸುದ್ದಿಮೂಲ ವಾರ್ತೆ
ಮೈಸೂರು, ಜೂ.14 : ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಆದರೂ ತರಕಾರಿ ಬೆಲೆ ಮಾತ್ರ ಬಿಸಲಿನಷ್ಟೇ ಸುಡುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿಬಿದ್ದಿದ್ದು ಜನ ಕಂಗಾಲಾಗಿದ್ದಾರೆ.
ಮಧ್ಯಮ ವರ್ಗದ ಜನರು ವಿದ್ಯುತ್ ಮತ್ತಿತರ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲೇ ಹಣ್ಣು ಹಂಪಲು, ತರಕಾರಿಗಳ ಬೆಲೆ ದಿಢೀರ್ ಗಗನಕ್ಕೇರಿದೆ. ಬೆಲೆಗಳು ದುಪ್ಪಟ್ಟಾಗಿದೆ.
ಒಂದು ಕೆಜಿ ತರಕಾರಿ, ಹಣ್ಣುಗಳನ್ನು ತೆಗೆದುಕೊಳ್ಳುವ ಬದಲಿಗೆ ಅರ್ಧ ಕೆಜಿ ತೆಗೆದುಕೊಳ್ಳುವ ಸ್ಥಿತಿಗೆ ಗ್ರಾಹಕರು ತಲುಪಿದ್ದಾರೆ. 1 ಕೆಜಿ ಬೀನ್ಸ್ 100 ರಿಂದ 120 ರೂ., ಕೆಜಿ ಕ್ಯಾರೆಟ್ 80 ರಿಂದ 100 ರೂ. ಕೆಜಿ ನುಗ್ಗೆಕಾಯಿ 120 ರೂ, ಬದನೆಕಾಯಿ 60 ರೂ., ಹಾಗಲಕಾಯಿ 80 ರೂ.ಗೆ ತಲುಪಿದೆ. ಟೊಮೆಟೋ ಬೆಲೆ ಕೆಜಿಗೆ 50 ರೂ. ಆಗಿರುವುದು ತರಕಾರಿ ಗಗನ ಕುಸುಮವಾಗಿದೆ.
ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಸೇಬು ಕೆಜಿಗೆ 200 ರಿಂದ 240 ರೂ., ಕಿತ್ತಲೆ ಹಣ್ಣು ಕೆಜಿಗೆ 160 ರಿಂದ 200 ರೂ., ಮೂಸಂಬಿ, ಸಪೋಟಾ ಸೇರಿದಂತೆ ಬಹುತೇಕ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ.
ಬೇಸಿಗೆ ಕಾರಣ ತರಕಾರಿ ಹಣ್ಣುಗಳಲ್ಲಿ ಉತ್ಪಾದನೆಯಲ್ಲಿ ಕ್ರಮೇಣ ಇಳಿಕೆಯಾಗಿದೆ. ಹೀಗಾಗಿ. ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಒಂದು ಕಡೆ ಬೇಸಿಗೆ, ಇದೀಗ ಮುಂಗಾರು ಮಳೆಯಾಗದೇ ರೈತರು ತರಕಾರಿ ಬೆಳೆಯುತ್ತಿಲ್ಲ. .ಶೇ. 70 ರಷ್ಟು ತರಕಾರಿ ಹಣ್ಣು ಹಂಪಲುಗಳು ಪೂರೈಕೆ ಕಡಿಮೆ ಆಗಿದೆ. ಇದರ ಪರಿಣಾಮ ಬೆಲೆ ಏರಿಕೆ ಆಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.