ಸುದ್ದಿಮೂಲ ವಾರ್ತೆ
ತುಮಕೂರು,ಜು.6 : ಜನರ ಸಹಭಾಗಿತ್ವದೊಂದಿಗೆ ಸ್ಥಳೀಯ ಸಂಪನ್ಮೂಲಗಳ ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿಯ ಆಶಯದೊಂದಿಗೆ ಕೇಂದ್ರ ಸರ್ಕಾರ ರೂಪಿಸಿದ ಸ್ಮಾರ್ಟ್ ಸಿಟಿ ಯೋಜನೆ ತುಮಕೂರಿನಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಹಳ್ಳ ಹಿಡಿಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ಆರೋಪಿಸಿದ್ದಾರೆ.
ದಾಖಲೆಗಳಲ್ಲಿ ಬಹುತೇಕ ಕಾಮಗಾರಿಗಳು ಮುಗಿದಿವೆ. ಅವುಗಳಲ್ಲಿ ನೈಜವಾಗಿ ಕೆಲವು ಅರ್ಧ ಕೂಡ ಕೆಲಸವಾಗಿಲ್ಲ. ಚುನಾವಣೆಯ ತರಾತುರಿಯಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳ್ಳದೆಯೇ ಉದ್ಘಾಟನೆಗೊಂಡಿದ್ದವು. ಅಂಥದರಲ್ಲಿ ಕನಿಷ್ಟ ಪೂರ್ಣಗೊಂಡ ಕಾಮಗಾರಿಗಳ ವ್ಯವಸ್ಥಿತ ನಿರ್ವಹಣೆಯನ್ನೂ ಸಹ ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡದಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.
ನಗರದ ಟೌನ್ಹಾಲ್ ವೃತ್ತದಲ್ಲಿ ಗ್ರಂಥಾಲಯದ ಮುಂಭಾಗದ ಬಿ.ಹೆಚ್.ರಸ್ತೆಯಲ್ಲಿ ಹಾಕಲಾಗಿದ್ದ ರಸ್ತೆ ವಿಭಜಕದ ಬ್ಯಾರಿಕೇಡ್, ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಮುರಿದಿದೆ. ಅಜಾಗರೂಕತೆಯಿಂದ ಬಂದ ವಾಹನವೊಂದು ಗುದ್ದಿದ ಪರಿಣಾಮ ಸ್ಟೀಲ್ ಬಾರಿಕೇಡ್ ವಿರೂಪಗೊಂಡು ತಿಂಗಳಾಗುತ್ತಾ ಬಂದರು. ಇದನ್ನು ಸರಿಪಡಿಸುವ ಗೋಜಿಗೆ ಸ್ಮಾರ್ಟ್ ಅಧಿಕಾರಿಗಳು ಮುಂದಾಗದಿರುವುದು ವಿಷಾದನೀಯ.
ಸ್ಮಾರ್ಟ್ ಸಿಟಿಯ ಈ ಮುರಿದುಕೊಂಡಿರುವ ರೋಡ್ ಡಿವೈಡರ್ನ ಕಳಪೆ ಗುಣಮಟ್ಟದ
ಬ್ಯಾರಿಕೇಡ್ ಇಡೀ ಟೌನ್ಹಾಲ್ ವೃತ್ತದ ಅಂದವನ್ನು ಕೆಡಿಸುತ್ತಿದೆ. ಕಾಮಗಾರಿ ಮುಗಿಸಿ ತಲೆ
ತೊಳೆದುಕೊಳ್ಳುವ ಗುತ್ತಿಗೆದಾರರು ಹಾಗೂ ಸ್ಮಾರ್ಟ್ ಅಧಿಕಾರಿಗಳು ನಿರ್ವಹಣೆ
ವಿಚಾರದಲ್ಲಿ ಅಸಡ್ಡೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತುಮಕೂರಿನ ಮಂಡಿಪೇಟೆ ಮುಖ್ಯ ರಸ್ತೆಯನ್ನು ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಮೂರೇ ತಿಂಗಳಿಗೆ ಅದು ಕುಸಿದಿತ್ತು. ಅದನ್ನು ಸರಿಪಡಿಸಲು ಕೊನೆಗೆ ಪಾಲಿಕೆಯಿಂದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗಿತ್ತು. ಇಂತಹ ಹಲವು ಅವಾಂತರಗಳು ನಗರದಲ್ಲಿ ಆಗುತ್ತಿವೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಾದ ಶ್ರೀನಿವಾಸ್ ಕೆ. ಅವರು ಗಮನಹರಿಸಿ ಕೇಂದ್ರ ಸರ್ಕಾರದ
ಮಹತ್ವಾಕಾಂಕ್ಷೆಯ ಯೊಜನೆ ಜನರ ಉಪಯೋಗಕ್ಕೆ ಬರುವಂತೆ ಮಾಡ ಬೇಕೆಂದು ಕೋರಿದ್ದಾರೆ.