ಸುದ್ದಿಮೂಲ ವಾರ್ತೆ
ಯಾದಗಿರಿ; ಜುಲೈ, 11. ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ವಸತಿ ಸಮಸ್ಯೆಗಳು ಉಂಟಾಗಿ ದೇಶದ ಅಭಿವೃದ್ಧಿಯ ವೇಗದ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆಯ ಕುಟುಂಬ ಯೋಜನಾ ಕ್ರಮಗಳನ್ನು ಬಳಸಿಕೊಂಡು ಯುವ ಪೀಳಿಗೆಯು ಆರೋಗ್ಯಕರ ಸಮಾಜ ಕಟ್ಟುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿಗೆ ನೀರೆರೆದು ಹಾಗೂ ಜನಸಂಖ್ಯಾ ನಿಯಂತ್ರಣ ಕುರಿತಂತೆ ಭಿತ್ತಿಪತ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿ,ಮಕ್ಕಳನ್ನು ಪಡೆಯುವುದು ಆಯ್ಕೆಯಾಗಬೇಕೆ ಹೊರತು ಅನಿವಾರ್ಯವಾಗಿರಬಾರದು. ಪ್ರತಿಯೊಬ್ಬರಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಕೌಟುಂಬಿಕ ವಿಚಾರಗಳಲ್ಲಿಯೂ ಸಹ ಪ್ರತಿಯೊಬ್ಬ ಮಹಿಳೆಗೂ ಸ್ವಂತ ನಿರ್ಧಾರ ಕೈಗೊಳ್ಳುವಂತಹ ಸ್ವಾತಂತ್ರ್ಯ ಹಕ್ಕು ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ ಅವರು ಮಾತನಾಡಿ; ಜನಸಂಖ್ಯಾ ನಿಯಂತ್ರಣದ ಕ್ರಮಗಳನ್ನು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಮದುವೆ ಮಾಡಿಕೊಳ್ಳುವ ವರನಿಗೆ 21 ಹಾಗೂ ವಧುವಿಗೆ 18 ವರ್ಷ ತುಂಬಿರಬೇಕು. ಇಬ್ಬರ ನಡುವೆ 4 ವರ್ಷದ ಅಂತರ ಇರಬೇಕು. ಯುವಜನತೆಯ ಸಬಲೀಕರಣ ಮತ್ತು ಶಿಕ್ಷಣ ಇಲಾಖೆಯಿಂದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಅಂದಾಗ ಮಾತ್ರ ಜನಸಂಖ್ಯೆ ತಡೆಗಟ್ಟಲು ಹೆಜ್ಜೆಯನ್ನಿಡಬಹುದು ಎಂದರು.
ಯವಕರು ಸಮಾಜದಲ್ಲಿ ಒಳ್ಳೆ ನಾಗರೀಕರಾಗಿ ಬೆಳೆಯಬೇಕು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಲಿಂಗ ಅಸಮಾನತೆ, ಬಡತನ, ಶಿಶು ಮರಣ ಮತ್ತಿತರ ಸಂಗತಿಗಳನ್ನು ಅರಿತುಕೊಳ್ಳಬೇಕು ಎಂದರು. ಜನಸಂಖ್ಯೆ ಹೆಚ್ಚಿದಂತೆ ಭೂಮಿ ಹೆಚ್ಚಳವಾಗಲ್ಲ. ಇದು ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಲಿದ್ದು, ಜನಸಂಖ್ಯೆ ನಿಯಂತ್ರಣ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾ ಶಸ್ತ್ರ ಚಿಕಿತ್ಸೆಕರಾದ ಡಾ.ರಿಜ್ವಾನಾ ಆಫ್ರೀನ್ ಅವರು ಜನಸಂಖ್ಯಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮುಬಶಿರ್ ಅಹ್ಮದ್, ಜಿಲ್ಲಾ ಅಂಧತ್ವ ನಿಯಂತ್ರಾಣಾಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ ಆರ್, ಬಾಲಕರ ಕಾಲೇಜಿನ ಪ್ರಾಂಶುಪಾಲ ರುದ್ರಗೌಡ ಪಾಟೀಲ್, ಮಹಿಳಾ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ನಿರ್ಮಲಾ ಡಿ ಸಿನ್ನೂರ್, ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.