ಸುದ್ದಿಮೂಲ ವಾರ್ತೆ
ತುಮಕೂರು,ಏ.13: ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಟಿಕೆಟ್ ಸಿಗದ ಕಾರಣ ಪಕ್ಷಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಮತ್ತೊಂದೆಡೆ ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುದ್ದಹನುಮೇಗೌಡ ಅವರು ಬಂಡಾಯ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಹೀಗಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಬೆನ್ನಲ್ಲೇ ತುಮಕೂರು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಿದ್ದತೆ ಮಾಡಿಕೊಂಡಿದ್ದಾರೆ. ತುಮಕೂರಿನ ಎಂ.ಜಿ ರಸ್ತೆಯಲ್ಲಿರುವ ಮಾಕಂ ಕಲ್ಯಾಣ ಮಂಟಪದಲ್ಲಿ ನೂರಾರು ಬೆಂಬಲಿಗರೊಂದಿಗೆ ಸಭೆ ನಡೆಸಿದರು. ಈ ವೇಳೆ ತಮಗೆ ತುಮಕೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ. ಬಿಜೆಪಿ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದರಿಂದ ತಮಗೆ ಅನ್ಯಾಯವಾಗಿದೆ. ಹೀಗಾಗಿ ಪಕ್ಷ ತೊರೆಯುವುದಾಗಿ ನಿರ್ಧಾರ ಪ್ರಕಟಿಸಿದರು.
ನಾನು ಉಸಿರು ಇರೋವರೆಗೂ ನಿಮ್ಮ ಸೇವಕನಾಗಿರುತ್ತೇನೆ. ನಾನು ಟಿಕೆಟ್ ಕೊಡಿ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೆ. ಆದರೆ, ಅದಕ್ಕೆ ಬೆಲೆ ನೀಡಲಿಲ್ಲ. ಮುಂದೆ ಏನು ಮಾಡಲಿ ಎಂಬುದನ್ನು ನೀವೇ ತಿಳಿಸಿ ಎಂದು ಬೆಂಬಲಿಗರ ಬಳಿ ವಿನಂತಿಸಿದರು. ಶಿವಣ್ಣ ಅಭಿಪ್ರಾಯ ಕೇಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಬೆಂಬಲಿಗರು, ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಆಗ್ರಹಿಸಿದರು.
ನನ್ನ ಮನೆಯೊಳಗೆ ಬಾವುಟಗಳಿವೆ. ಅವುಗಳನ್ನು ಮೊದಲು ಅದನ್ನ ಬೇರೆಡೆಗೆ ವರ್ಗಾವಣೆ ಮಾಡುತ್ತೇನೆ. ಆ ಬಳಿಕ ಮಾಧ್ಯಮಗಳನ್ನು ಕರೆಸಿ ರಾಜೀನಾಮೆ ನಿರ್ಧಾರ ಅಧಿಕೃತವಾಗಿ ಪ್ರಕಟಿಸುತ್ತೇನೆ ಎಂದು ಸೊಗಡು ಶಿವಣ್ಣ ಹೇಳಿದರು.
ಮತ್ತೊಂದೆಡೆ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡ ಅವರೂ ಕೂಡ ಟಿಕೆಟ್ ಸಿಗದೇ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಎಂ.ಪಿ ಮುದ್ದಹನುಮೇಗೌಡ ಕೂಡ ತಮ್ಮ ಬೆಂಬಲಿಗರೊಂದಿಗೆ ತೋಟದ ಮನೆಯಲ್ಲಿ ಸಭೆ ನಡೆಸಿದರು.
ಇನ್ನು ಪಕ್ಷದಿಂದ ಟಿಕೆಟ್ ಕೈತಪ್ಪಿದ್ದು, ಕೃಷ್ಣಕುಮಾರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಬಂಡಾವಾಗಿ ಸ್ಪರ್ಧಿಸುವ ಬಗ್ಗೆ ಮುದ್ದಹನುಮೇಗೌಡ ಮುನ್ಸೂಚನೆ ನೀಡಿದ್ದಾರೆ.