ಸುದ್ದಿಮೂಲವಾರ್ತೆ,ಬೀದರ್,ಏ.೧೩:
ಕರ್ನಾಟಕ ವಿಧಾನಸಭೆಗೆ ನಾಮಪತ್ರ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ.
ಕಾಂಗ್ರೆಸ್ ಜಿಲ್ಲೆಯ ಆರು ವಿಧಾನ ಸಭೆ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಔರಾದ್ ಎಸ್ಸಿ ಮೀಸಲು ಕ್ಷೇತ್ರ ಹಾಗೇ ಉಳಿಸಿಕೊಂಡಿದೆ. ಬಿಜೆಪಿ ಈಗಾಗಲೇ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, ಉಳಿದೆರಡು ಕ್ಷೇತ್ರಕ್ಕೂ ಟಿಕೆಟ್ ಅಖೈರುಗೊಳಿಸಿದೆ.
ಐದು ಕ್ಷೇತ್ರಗಳ ಪೈಕಿ ಬಸವಕಲ್ಯಾಣದಲ್ಲಿ ಬಂಡಾಯ ಏಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇನ್ನು ಬೀದರ್ದಿಂದ ಈಶ್ವರ್ ಸಿಂಗ್ ಠಾಕೂರ್ ಹಾಗೂ ಭಾಲ್ಕಿಯಿಂದ ಮಾಜಿ ಶಾಸಕ ಪ್ರಕಾಶ್ ಖಂಡ್ರೆಗೆ ಟಿಕೆಟ್ ಘೋಷಿಸಲಾಗಿದೆ.
ಬಿಜೆಪಿ ಬೀದರ್ ಕ್ಷೇತ್ರದಿಂದ ಹಲವು ಲಿಂಗಾಯತ ಮುಖಗಳು ನಡೆಸಿದ ಲಾಬಿ ಕೆಲಸ ಮಾಡಿಲ್ಲ. ಸೂರ್ಯಕಾಂತ್ ನಾಗಮಾರಪಳ್ಳಿ, ಗುರುನಾಥ್ ಕೊಳ್ಳೂರ್, ಸೋಮಶೇಖರ್ ಪಾಟೀಲ್ ತೀವ್ರ ಲಾಬಿ ನಡೆಸಿದರಾದರೂ ಟಿಕೆಟ್ ದೊರಕಿಲ್ಲ.
ಸಾಕಷ್ಟು ಲಿಂಗಾಯತ ಮತಗಳು ಇದ್ದಾಗ್ಯೂ ಟಿಕೆಟ್ಗೆ ಪರಿಗಣಿಸಿಲ್ಲ ಎಂಬುದು ಲಿಂಗಾಯತರ ಸಹಜ ಪ್ರಶ್ನೆಯಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಸೂರ್ಯಕಾಂತ್ ನಾಗಮಾರಪಳ್ಳಿ ಕಳೆದ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರೂ ಟಿಕೆಟ್ ತಪ್ಪಿಸಲಾಗಿದೆ. ಬಂಡಾಯ ಖಚಿತ ಎನ್ನುತ್ತಿದ್ದಾರೆ ಸೂರ್ಯಕಾಂತ್ ನಾಗಮಾರಪಳ್ಳಿ.