ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಅ. 31: ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ ಇಂದಿನಿಂದ ಪರಿಣಾಮಕಾರಿ ರೂಪ ಪಡೆಯಲಿದ್ದು, ಜಿಲ್ಲೆಯ ಜನರು ಇದಕ್ಕೆ ಸಹಕರಿಸಬೇಕು. ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮನವಿ ಮಾಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನ” ಜಾರಿಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಪ್ಲಾಸ್ಟಿಕ್ ಮುಕ್ತ ಮಾಡುವ ಸಂಬಂಧ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ಅವರು ಮಾತನಾಡಿದರು.
ಈವರೆಗೆ ವರ್ತಕರಿಗೆ, ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ಪ್ಲಾಸ್ಟಿಕ್ ಬದಲಾಗಿ ಇತರ ಮಾರ್ಗೋಪಾಯಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಮಾಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ, ಬಳಸಲು ಪ್ರೇರಿಪಿಸಿದರೆ ಅಂತಹವರಿಗೆ ಕಾನೂನು ರೀತಿ ದಂಡ ವಿಧಿಸುವ ಕಾರ್ಯ ಇಂದಿನಿಂದ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದರು.
ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬ್ಯಾಗ್ ಗಳ ಬದಲಾಗಿ ಬಟ್ಟೆಚೀಲಗಳನ್ನು ಬಳಸಬೇಕು, ಮನೆಯಿಂದಲೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಬೇಕು, ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು,ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಜಗಿದು ಉಗಿಯುವುದು, ಮಲಮೂತ್ರ ವಿಸರ್ಜಿಸಿ ಮಾಲಿನ್ಯ ಮಾಡುವುದು, ಬಯೋ ಮೆಡಿಕಲ್ ವೆಸ್ಟನ್ನು ಎಸೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಮೂಲಾಜಿಲ್ಲದೆ ಜಿಲ್ಲಾಡಳಿತದ ಸಕ್ಷಮ ಅಧಿಕಾರಿಗಳು ಆಯಾ ಹಂತದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿಯೂ ಈ ಕಾರ್ಯಗಳು ಪರಿಣಾಮಕಾರಿಯಾಗಿ ನಾಳೆಯಿಂದ ಜಾರಿಯಾಗುತ್ತವೆ ಎಂದು ಹೇಳಿದರು.