ಸುದ್ದಿಮೂಲ ವಾರ್ತೆ
ಚಿಂತಾಮಣಿ, ಆ.25: ತಾಲೂಕಿನ ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ ಶ್ರೀವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಗೋಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಮಠದ ಗೋಶಾಲೆಯನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಗೋಶಾಲೆಯಲ್ಲಿರುವ ಹಸುಗಳನ್ನು ಶುಚಿ ಮಾಡಿ ನೂತನ ವಸ್ತ್ರಗಳನ್ನು ತೊಡಿಸಲಾಗಿತ್ತು. ಗೋಶಾಲೆಯಲ್ಲಿರುವ ಗೋವುಗಳಿಗೆ ಗೋಗ್ರಾಸವನ್ನು ನೀಡಲಾಯಿತು. ಗೋಶಾಲೆಯ ಆವರಣದಲ್ಲಿ ಸದ್ಗುರು ತಾತಯ್ಯನವರ ಭಾವಚಿತ್ರವನ್ನು ಇಡಲಾಗಿತ್ತು. ಗೋಮಾತೆಗೆ ಅಷ್ಟೋತ್ತರದ ಮೂಲಕ ಪುಷ್ಪವೃಷ್ಠಿಯನ್ನು ನೆರವೇರಿಸಲಾಯಿತು.
ಧೂಪ, ದೀಪಗಳನ್ನು ನೆರವೇರಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ನಂತರ ಗೋಶಾಲೆಯ ಎಲ್ಲಾ ಹಸುಗಳನ್ನು ದೇವಾಲಯದ ಬಳಿಗೆ ಕರೆತಂದು ಪ್ರದಕ್ಷಿಣೆ ಮಾಡಿಸಿ, ಮಂಗಳಾರತಿಯನ್ನು ಬೆಳಗಲಾಯಿತು.
ಮಠದ ಗೋಶಾಲೆಯಲ್ಲಿ ವಿವಿಧ ತಳಿಗಳ ದೇಶಿ ಹಸುಗಳನ್ನು ಸಂರಕ್ಷಿಸಿ ಪೋಷಿಸಲಾಗುತ್ತಿದೆ. ಪ್ರತಿನಿತ್ಯವೂ ದೇವಾಲಯದಲ್ಲಿ ಬೆಳಿಗ್ಗೆ ಪ್ರಾತಃಕಾಲದಲ್ಲಿ ಗೋಪೂಜೆಯನ್ನು ನೆರವೇರಿಸಲಾಗುತ್ತದೆ.
ಈ ಗೋಪೂಜಾ ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಭಾಗವಹಿಸಿದ್ದರು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್, ಎಂ.ಎ.ನಾರಾಯಣಸ್ವಾಮಿ, ಉಪನ್ಯಾಸಕ ವೆಂಕಟರಮಣಪ್ಪ, ನಾರಾಯಣರೆಡ್ಡಿ ಮತ್ತಿತರರು ಭಾಗವಹಿಸಿದ್ದರು.